ಚಿಕ್ಕಮಗಳೂರು: ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಸ್ವಾಭಾವಿವಾಗಿಯೇ ಬೆಳೆಯುತ್ತದೆ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದರೆ, ಗೆಲ್ಲಲೇಬೇಕು ಎಂಬ ಹಂಬಲವನ್ನು ಕ್ರೀಡೆ ಮೂಡಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಹೊರವಲಯದ ಸಾಯಿಏಂಜಲ್ಸ್ ಶಾಲೆಯಲ್ಲಿ ಏರ್ಪಡಿಸಿದ್ದ ಸಿಬಿಎಸ್ಇ ಅಂತರ್ ಶಾಲಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಗೆದ್ದಿರುವ ತಂq, ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತೇನೆ. ಆದರೆ, ಸೋತವರು ದೃತಿಗೆಡಬೇಕಿಲ್ಲ ಮುಂದೆ ತಮಗೂ ಭವಿಷ್ಯವಿದೆ ಎಂದು ಮನಗಂಡು ಇಲ್ಲಿಂದ ನಿರ್ಗಮಿಸಿ ಎಂದರು.
ನಾನೂ ಕೂಡ ಆಲ್ದೂರಿನ ಸರಕಾರಿ ಶಾಲೆಯಲ್ಲಿ ೧-೧೦ ನೇ ತರಗತಿ ಓದಿದವನು. ಆಗ ನೀವು ರ್ಯಾಂಕ್ ಬರಲೇಬೇಕು ಎಂದು ಮನೆಯಲ್ಲಿ ಅಥವಾ ಶಾಲೆಯಲ್ಲಿ ಯಾರೂ ತಾಕೀತು ಮಾಡುತ್ತಿರಲಿಲ್ಲ. ಜಸ್ಟ್ ಪಾಸಾದರೆ ಸಾಕು ಎಂದುಕೊಂಡವರು ನಾವು. ಹೀಗಾಗಿ ಬಾಲ್ಯವನ್ನು ಬಹಳ ಸಂತೋಷದಿಂದ ಅನುಭವಿಸಿದ್ದೇವೆ. ನಾನೂ ಕೂಡ ಓರ್ವ ಕಬಡ್ಡಿ ಆಟಗಾರ. ಆಗಾಗ ಹಳೆ ನೆನಪಿನ ಜತೆಗೆ ಕಬಡ್ಡಿ ಆಟ ಆಡುತ್ತಿರುತ್ತೇನೆ ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.
ಕ್ರೀಡೆ ಕೂಡ ಶಿಕ್ಷಣದ ಅವಿಭಾಜ್ಯ ಅಂಗ. ಹೀಗಾಗಿ ಕೇಂದ್ರ ಸರಕಾರ ಇತ್ತೀಚೆಗೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡುತ್ತಿದೆ. ೧೯೪೭ ರಹೊತ್ತಿಗೆ ನಮ್ಮ ದೇಶ ಒಲಂಪಿಕ್ಸ್ನಲ್ಲಿ ಅಗ್ರಸ್ಥಾನಕ್ಕೆ ತಲುಪಬೇಕು ಎಂಬ ಆಶಯವನ್ನು ಸರಕಾರ ಹೊಂದಿದೆ ಎಂದು ಹೇಳಿದರು.
ಮೌಂಟನ್ವ್ಯೂ, ಮಹರ್ಷಿ ವಿದ್ಯಾಮಂದಿರ, ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಾಯಿ ಏಂಜಲ್ಸ್ ಸಂಸ್ಥೆಯ ಮುಖ್ಯಸ್ಥರಾದ ವಿಜಯಾನಾಗೇಶ್, ಕಾರ್ಯದರ್ಶಿ ಕಾರ್ತಿಕ್, ಪ್ರಾಂಶುಪಾಲರಾದ ಯಾಮಿನಿ ಸವೂರ್, ಬಸವರಾಜು ಮತ್ತಿತರರಿದ್ದರು.
Confidence building in students through sports