ಚಿಕ್ಕಮಗಳೂರು: ಭಾರತೀಯ ಸಂಸ್ಕೃತಿ ಸಂತ ಋಷಿಯವರ ಸಂಕಸ್ಕೃತಿಯಾಗಿದ್ದು, ಸ್ವಾತಂತ್ರ್ಯದ ಹೊಸ್ತಿಲಲ್ಲೇ ಪ್ರಾರಂಭವಾದ ಅನುವ್ರತ ಆಂದೋಲನ ಸಕಾರಾತ್ಮಕ ನೈತಿಕ ಮೌಲ್ಯಗಳು ಹಾಗೂ ಚಾರಿತ್ರಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಮುನಿಶ್ರೀ ಮೋಹಜಿತ್ ಮುನಿ ಹೇಳಿದರು.
ಅವರು ಇಂದು ಇಲ್ಲಿನ ತೇರಾಪಂಥ್ ಭವನದಲ್ಲಿ ಅನುವ್ರತ್ ಉದ್ಭೋಧನಾ ಅಂಗವಾಗಿ ಕಳೆದ ೭ ದಿನಗಳಿಂದ ನಡೆದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಆಚಾರ್ಯ ತುಳಸಿ ಅವರು ಈ ಆಂದೋಲನವನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಜೊತೆಯಲ್ಲಿ ಬಡ ಜನರ ನಿವಾಸವನ್ನು ತಲುಪಿ ರಾಜಕೀಯ ಪರಿಶುದ್ಧತೆ, ಅಸ್ಪೃಷ್ಯತಾ ನಿವಾರಣೆ, ವ್ಯಾಪಾರ ಶುದ್ಧಿ, ನಶಾ ಮುಕ್ತಿ, ಸಾಂಪ್ರದಾಯಿಕ ಸದ್ಭಾವನೆ, ಪರ್ಯಾವರಣೆ ಶುದ್ಧಿ, ಅಹಿಂಸೆ, ಕರುಣೆಯ ವಿಕಾಸ ಮೊದಲಾದ ಆಯಾಮಗಳನ್ನು ಒಳಗೊಂಡ ಈ ಆಂದೋಲನದಿಂದ ಇಲ್ಲಿಯವರೆಗೆ ಸಾವಿರಾರು ಜನರು ನಶಮುಕ್ತರಾಗಿ ಪರಿಶುದ್ಧ ಜೀವನ ನಡೆಸುತ್ತಿದ್ದಾರೆಂದರು.
ಅನುವ್ರತ್ ಉದ್ಭೋಧನಾ ಸಪ್ತಾಹದ ಅಂಗವಾಗಿ ೭ ದಿನಗಳವರೆಗೆ ದೇಶದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಹಾಗೂ ಮಕ್ಕಳನ್ನು ಜಾಗೃತಗೊಳಿಸುವ ಕೆಲಸ ಅನುವ್ರತ ಸಮಿತಿಯ ಮೂಲಕ ಮಾಡಲಾಗಿದೆ ಎಂದು ಶ್ಲಾಘಿಸಿದರು.
ಇದು ಕೇವಲ ಅನುವ್ರತ ಸಮಿತಿಯ ಕಾರ್ಯವಾಗಿರದೆ ಸಂಪೂರ್ಣ ಸಮಾಜ ಹಾಗು ರಾಷ್ಟ್ರದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಸಮಸ್ಯೆಗಳ ಬೆಟ್ಟಗಳನ್ನು ಕಡಿಮೆಗೊಳಿಸಲು ನಮ್ಮ ಚಿತ್ತವನ್ನು ಪ್ರಯೋಗಿಸಿದಲ್ಲಿ ಸಮತೋಲನ ಸಾಧ್ಯ ಎಂದರು.
ಮಹಾತ್ಮ ಗಾಂಧೀಜಿಯವರು ಅಹಿಂಸಾತ್ಮಕ ಜೀವನ ಪದ್ದತಿ, ನಶಾ ಮುಕ್ತ, ಸದ್ಭಾವನೆಯ ಪ್ರತೀಕವಾಗಿದ್ದರು. ಆಚಾರ್ಯ ತುಳಸಿ ಹಾಗೂ ಗಾಂಧೀಜಿಯವರ ಮೌಲ್ಯಗಳನ್ನು ಜನರಿಗೆ ತಲುಪಿಸಿದಾಗ ಮಾನವ ಜಗತ್ತಿಗೆ ಮತ್ತು ಪ್ರಾಣಿಗಳಿಗೆ ನಾವು ಕೊಡುವ ಅಮೂಲ್ಯ ಕೊಡುಗೆಯಾಗುತ್ತದೆ ಎಂದು ವಿಶ್ಲೇಷಿಸಿದರು.
ಸಂಯಮ ಮತ್ತು ಸುಖದ ಸುಖದ ಜೀವನ ನಡೆಸುವಲ್ಲಿ ನೈತಿಕ ಮೌಲ್ಯಗಳ ವಿಕಾಸ, ಕರುಣೆ, ಸದ್ಭಾವನೆಯ ವಿಕಾಸ, ನಮ್ಮ ತಳಪಾಯವಾಗಬೇಕು. ಇದರಿಂದಾಗಿ ರಾಷ್ಟ್ರದ ವಿಕಾಸಕ್ಕೂ ಅನುವ್ರತ್ ಸಂದೇಶಗಳು ಮಹತ್ವಪೂರ್ಣ ಕೊಡುಗೆಯನ್ನು ನೀಡಬಲ್ಲವು ಎಂದರು.
ಪ್ರಜಾಪಿತ ಬ್ರಹ್ಮಾಕುಮಾರೀಸ್ನ ಸಂಚಾಲಕಿ ಭಾಗ್ಯಕ್ಕ ಮಾತನಾಡಿ, ಭಾರತ ದೇಶದಲ್ಲಿ ಜೈನಧರ್ಮ ವಿಶೇಷವಾಗಿದ್ದು, ಸತ್ಯ, ಅಹಿಂಸೆ, ಮೌಲ್ಯಾಧಾರಿತ ಜೀವನ, ಆದರ್ಶಗಳನ್ನು ರೂಪಿಸುವಲ್ಲಿ ತುಳಸಿ ಆಚಾರ್ಯರು ತ್ಯಾಗ, ತಪಸ್ಸು, ಸೇವೆ ಮೂಲಕ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದರು.
ಜೈನ ಧರ್ಮದ ಮೂಲ ತತ್ವಗಳನ್ನು ಈ ಚಾತುರ್ಮಾಸ ಸಂದರ್ಭದಲ್ಲಿ ಜನರಿಗೆ ಮನಮುಟ್ಟುವ ಕೆಲಸ ಮಾಡಿದ್ದಾರೆ. ಎಲ್ಲಿಯವರೆಗೆ ಆತ್ಮ ಕಲ್ಯಾಣ ಆಗುವುದಿಲ್ಲವೋ ಅಲ್ಲಿಯವರೆಗೆ ಜಗತ್ತಿನ ಕಲ್ಯಾಣ ಆಗಲು ಸಾಧ್ಯವಿಲ್ಲ ಎಂದರು.
ಅನುವ್ರತ್ ಸಮಿತಿಯ ಅಧ್ಯಕ್ಷೆ ಮಂಜುಳಾ ಬನ್ಸಾಲಿ ಮಾತನಾಡಿ, ಅನುವ್ರತ್ ಉತ್ಭೋಧನಾ ಸಪ್ತಾಹದ ಅಂಗವಾಗಿ ಪರಿಸರ ಶುದ್ಧಿ ದಿನ, ಅಹಿಂಸಾ ದಿನ, ಅನುವ್ರತ್ ಪ್ರೇರಣಾ ದಿನ, ಅನುಶಾಸನ ದಿನ, ನಶಾ ಮುಕ್ತಿ (ವ್ಯಸನಮುಕ್ತಿ), ಸಾಂಪ್ರದಾಯಿಕ ಸೌಹಾರ್ದ ದಿನ, ಜೀವನ ವಿಜ್ಞಾನ ದಿನ ಹೀಗೆ ೭ ದಿನಗಳು ವಿವಿಧ ಗಣ್ಯರ ಮೂಲಕ ಪ್ರವಚನಗಳನ್ನು ಮತ್ತು ಸಂದೇಶವನ್ನು ತಿಳಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ತೇರಾಪಂಥ್ ಸಭಾದ ಅಧ್ಯಕ್ಷ ಮಹೇಂದರ್ ಡೋಸಿ,ಅನುವ್ರತ ಸಂಸ್ಥೆಯ ಮಂಜುಬಾಯಿ ಬನ್ಸಾಲಿ, ನಗರಸಭೆ ಸದಸ್ಯ ವಿಫುಲ್ಕುಮಾರ್ ಜೈನ್, ಗೌತಮ್ ಆಚಾ, ಲಾಲ್ಚಂದ್ ಬನ್ಸಾಲಿ, ಕಿಶೋರ್ ಆಚಾ ಸಜ್ಜನ್ರಾಜ್, ಪದಮ್ ನಹರ್, ಮಾಣಿಕ್ಚಂದ್ಗಾದಿಯಾ, ಸರೋಜಾಬಾಯಿ ಸಿಯಾಲ್, ಚಂದ್ರಗಾದಿಯಾ, ಗುಣವತಿ ನಹಾರ್, ಸುರೇಶ್ ಆಚಾ, ಶಾಂತಿಲಾಲ್ಗಾದಿಯಾ, ಗೌತಮ್ ನಹರ್, ಅಶೋಕ್ ಡೋಸಿ, ಸುರೇಂದ್ರ, ಲಾಲ್ಚಂದ್ ಬರ್ಲೋಟ, ಭರತ್ ಬರ್ಲೋಟ, ಮದನ್ ಚಂದ್ಗಾದಿಯಾ ಭೂಮಿಕ ಟಿವಿಯ ಮುಖ್ಯಸ್ಥರಾದ ಅನಿಲ್ಆನಂದ್ ಇತರರು ಇದ್ದರು.
Propagation of moral values through Anuvrat movement