ಚಿಕ್ಕಮಗಳೂರು: ನಿಗದಿಪಡಿಸಿರುವಂತೆ ೨೦೦ ಗೋವುಗಳಿರುವ ಗೋಶಾಲೆಗೆ ಪ್ರತೀ ಹಸುವಿಗೆ ದಿನಕ್ಕೆ ೧೭.೫೦ ರೂ. ನಂತೆ ಸಂವಿಧಾನ ಬದ್ಧವಾದ ಹಕ್ಕನ್ನು ನೀಡಬೇಕು ಎಂದು ಕೊಪ್ಪ ತಾಲ್ಲೂಕಿನ ಕೆಮ್ಮಣ್ಣು ಗ್ರಾಮದ ಶ್ರೀ ಕಾಮಧೇನು ಗೋಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ ನಾಗೇಶ್ ಅಂಗೀರಸ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ರಾಜ್ಯದ ಕೆಲವು ಗೋಶಾಲೆಗಳಿಗೆ ಕಣ್ಣೊರೆಸುವ ತಂತ್ರದಂತೆ ಅಲ್ಪಸ್ವಲ್ಪ ಹಣ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು.
೨೦೨೪-೨೫ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ನಿಯಮಾನುಸಾರ ಹಣ ಬಿಡುಗಡೆ ಮಾಡದೆ ನೊಂದಾಯಿತ ೩೩೫ ಗೋಶಾಲೆಗಳಿಗೆ ನೀಡಬೇಕಾದ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಸಂವಿಧಾನ ರೂಪಿಸಿರುವ ಕಾನೂನಿನ ಅಡಿಯಲ್ಲಿ ಮೂಕ ಪ್ರಾಣಿಗಳಾದ ಗೋ ಸಾಕಾಣಿಕೆಗೆ ನಿಗದಿಪಡಿಸಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಗೋವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತದೆಯೇ ಎಂಬ ನಿಲುವನ್ನು ಬದಲಿಸಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪುಣ್ಯಕೋಟಿ ಪೋರ್ಟಲ್ ಅಡಿಯಲ್ಲಿ ಈಗಾಗಲೇ ರಾಜ್ಯಾದ್ಯಂತ ೪೦ ಸಾವಿರ ಗೊವುಗಳ ನೊಂದಣಿಯಾಗಿದ್ದು, ಅಧ್ಬುತವಾದ ಸಮಾಜ ಒಳಗೊಳ್ಳುವಿಕೆಯ ಗೋಸಂರಕ್ಷಣಾ ಅಭಿಯಾನಕ್ಕೆ ಸರ್ಕಾರ ಪೂರ್ಣ ತಿಲಾಂಜಲಿ ನೀಡಿದೆ ಎಂದು ಟೀಕಿಸಿದರು.
ಹಿಂದೆ ಗೋವಿನ ಜಪ ಮಾಡುತ್ತಿದ್ದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಚೀಮಾರಿ ಹಾಕಿದ ತಕ್ಷಣ ಹಣ ಬಿಡುಗಡೆ ಮಾಡಿ, ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ಪರಿಸ್ಥಿತಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬರಬಾರದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯ ಮಹೇಶ್ ಇದ್ದರು.
Demand to release the grant allotted to Goshalas