ಚಿಕ್ಕಮಗಳೂರು: ನಗರದ ಕೆಲವು ಖಾಸಗಿ ಪ್ರೌಢಶಾಲೆಗಳಲ್ಲಿ ನಡೆಯುತ್ತಿರುವ ಅಕ್ರಮ ನಿಯಂತ್ರಿಸುವಲ್ಲಿ ವಿಫಲವಾಗಿರುವ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಅಧಿಕಾರಿಯ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ಸಾಮಾಜಿಕ ಕಾರ್ಯಕರ್ತ ಜೇಮ್ಸ್ ಎಚ್ಚರಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಸರಕಾರಿ, ಅನುದಾನ, ಅನುದಾನರಹಿತ ಸೇರಿ ಒಟ್ಟು ೮೪ ಪ್ರೌಢಶಾಲೆಗಳಿವೆ. ಬಹುತೇಕ ಶಾಲೆಗಳಲ್ಲಿ ಸರಕಾರದ ಯಾವುದೇ ನೀತಿ, ನಿಯಮ ಪಾಲಿಸುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.
ಇದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಕಾರಣವಾಗಿದೆ. ಸರಕಾರದ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಅಮಾಯಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಗೌರಿಕಾಲುವೆಯ ಖಾಸಗಿ ಶಾಲೆಯೊಂದರಲ್ಲಿ ಕಳೆದ ಬಾರಿ ೧೦ನೇ ತರಗತಿ ಪರೀಕ್ಷೆಯಲ್ಲಿ ೨೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಆದರೆ, ಆ ಶಾಲೆಯ ಆಡಳಿತ ಮಂಡಳಿ ೪೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೧೦೦ ಫಲಿತಾಂಶ ಎಂದು ಬ್ಯಾನರ್, ಪೋಸ್ಟರ್ ಹಾಕಿಸಿದ್ದರು. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕೆಲವು ಖಾಸಗಿ ಶಾಲೆಗಳಲ್ಲಿ ಓದಿನಲ್ಲಿ ಕಳಪೆ ಸಾಧನೆ ತೋರುವ ಮಕ್ಕಳನ್ನು ತಮ್ಮ ಶಾಲೆಯಲ್ಲಿ ಪರೀಕ್ಷೆಗೆ ಕೂರಿಸದೆ ಇತರೆ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಸುತ್ತಾರೆ. ಪಾಸಾದರೆ ಮೂಲ ಶಾಲೆಯ ಹೆಸರು, ಅನ್ನುತ್ತೀರ್ಣರಾದರೆ ಪರೀಕ್ಷೆಗೆ ಕುಳಿತ ಶಾಲೆಯ ಮೇಲೆ ಜವಾಬ್ದಾರಿ ಹೊರಿಸುವ ಕಳ್ಳಾಟ ಹಿಂದಿನಿಂದಲೂ ನಡೆಯುತ್ತಾ ಬಂದಿದೆ ಎಂದು ಟೀಕಿಸಿದರು.
ಇದು ಶಾಲಾ ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಕಣ್ಣು ಕಾಣದಂತೆ ವರ್ತಿಸುತ್ತಿದೆ. ಈ ಬಗ್ಗೆ ಹಲವು ಬಾರಿ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ್ದೇನೆ. ನಮ್ಮ ಮನವಿಗೆ ಮನ್ನಣೆ ನೀಡಿಲ್ಲ. ಹೀಗಾಗಿ ಕೆಲ ಖಾಸಗಿ ಶಾಲೆಗಳ ಕಳ್ಳಾಟ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದನ್ನು ಬಯಲಿಗೆಳೆಯಲು ಹೈಕೋರ್ಟ್ನಲ್ಲಿ ದಾವೆ ಹೂಡಿ ನ್ಯಾಯ ಪಡೆಯಲು ಮುಂದಾಗಿದ್ದೇನೆ. ಇದರಿಂದ ಮುಂದೆ ಬರುವ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
School Education Department has filed a High Court against the District Officer for failing to control the illegality