ಚಿಕ್ಕಮಗಳೂರು: ಕಟ್ಟಡ ಕಾರ್ಮಿಕರ ಬದುಕಿಗೆ ಅಗತ್ಯ ನೆರವು ನೀಡಲು ೪,೯೮,೫೦,೩೫೮ ರೂ. ನೆರವಿನ ಜೊತೆಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಇಲ್ಲಿನ ಕಾರ್ಮಿಕ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಕಾರ್ಮಿಕ ಇಲಾಖೆ ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವೆಲ್ಡರ್ ಮ್ಯಾಸಸ್ ಹಾಗೂ ಎಲೆಕ್ಟ್ರಿಷಿಯನ್ ಆಗಿ ನೊಂದಣಿಯಾಗಿರುವ ಫಲಾನುಭವಿಗಳಿಗೆ ಉಚಿತ ಸಲಕರಣೆಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಜನರ ಬದುಕನ್ನು ಕಟ್ಟಲು ಉದ್ದೇಶವಾಗಿಟ್ಟುಕೊಂಡ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಅಗತ್ಯ ಪರಿಕರಗಳ ಕಿಟ್ನ್ನು ಉಚಿತವಾಗಿ ನೀಡಲು ಮುಂದಾಗಿದೆ ಎಂದರು.
ಪಿಂಚಣಿ ಸೌಲಭ್ಯ, ದುರ್ಬಲತೆ ಸೌಲಭ್ಯ, ತರಬೇತಿ ಸಹಿತ ಟೂಲ್ಕಿಟ್ ವಿತರಣೆ, ಶ್ರಮ ಸಂಸಾರ ಸಾಮರ್ಥ್ಯ ತರಬೇತಿ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ ಸೇರಿದಂತೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ವೈದ್ಯಕೀಯ ಅಪಘಾತ ಪರಿಹಾರ, ವಿವಾಹಕ್ಕೆ ಸಹಾಯಧನ, ಶ್ರಮಿಕರಿಗೆ ಸಂಚಾರಿ ಆರೋಗ್ಯ ತಪಾಸಣೆ ಮಾಡುವ ಸೌಲಭ್ಯದ ಮೂಲಕ ನಿಮ್ಮಗಳ ಬದುಕಿಗೆ ಸಹಾಯವಾಗುವಂತ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಡುತ್ತಿದ್ದಾರೆ ಅವರಿಗೆ ಅಭಿನಂದಿಸುತ್ತೇನೆಂದರು.
ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚಿಕ್ಕಮಗಳೂರು ತಾಲ್ಲೂಕಿನ ಕಟ್ಟಡ ಕಾರ್ಮಿಕರಿಗೆ ೪,೯೮,೫೦,೩೫೮ ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಿದೆ ಎಂದು ಶ್ಲಾಘಿಸಿದ ಅವರು, ಅಪಘಾತದಲ್ಲಿ ಮೃತಪಟ್ಟವರಿಗೆ ಒಟ್ಟು ೫೦ ಲಕ್ಷ ರೂ. ವೈದ್ಯಕೀಯ ವೆಚ್ಚಕ್ಕೆ ೨೮,೯೧,೭೫೮ ರೂ. ನೀಡಲಾಗಿದೆ. ಮದುವೆಗಳಿಗೆ ೨,೮೮,೭೦,೦೦೦ ರೂ. ಧನಸಹಾಯ ನೀಡಲಾಗಿದೆ ಎಂದು ವಿವರಿಸಿದರು.
ಕಟ್ಟಡ ಕಾರ್ಮಿಕರು ಸರ್ಕಾರ ನೀಡುತ್ತಿರುವ ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಪರಿಕರಗಳ ಕಿಟ್ ಪಡೆದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಕರೆನೀಡಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಯಾರೂ ಕದಿಯಲಾರದ, ಮೋಸ ಮಾಡಲಾರದ ಶಿಕ್ಷಣಕ್ಕೆ ಪೋಷಕರು ಹೆಚ್ಚು ಆದ್ಯತೆ ನೀಡಬೇಕು. ಬಡವರು ಶೋಷಿತರನ್ನು ಸಮಾಜದ ಮುನ್ನಲೆಗೆ ತರಬೇಕೆಂದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದವರು ಸಮಾಜದಲ್ಲಿ ಒಳ್ಳೆಯ ಮಾತನ್ನು ಆಡದೆ ಅವರ ಮನೆಯಿಂದ ಕೊಟ್ಟರಾ, ಇದರಲ್ಲಿ ಅವರಿಗೇನು ಲಾಭ ಇದೆ ಎಂಬಿತ್ಯಾದಿ ಮಾತನಾಡುತ್ತಾರೆಂದು ವಿಷಾಧಿಸಿದರು.
ಸರ್ಕಾರದ ಸೌಲಭ್ಯ ಪಡೆದು ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಬೇಕು, ಇದು ಆಗದ ಹೊರತು ಜಗತ್ತಿನಲ್ಲಿ ಒಳ್ಳೆಯವರಾಗಿ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಇಲಾಖೆಯ ಆಯುಕ್ತ ರವಿಕುಮಾರ್ ಮಾತನಾಡಿ, ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲದಂತೆ ಕೆಲಸ ಮಾಡುವ ಕಟ್ಟಡ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದ್ದಾರೆ. ಆರ್ಥಿಕ ಭದ್ರತೆ ಇಲ್ಲದಿರುವವರು ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ೧೯೯೬ ರಲ್ಲಿ ಕಾಯಿದೆ ಜಾರಿಗೆ ತಂದಿತು. ಅದಕ್ಕೆ ರಾಜ್ಯದಲ್ಲಿ ೨೦೦೬ ರಲ್ಲಿ ನಿಯಮ ರೂಪಿಸಿ ಮಂಡಳಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಟ್ಟಡ ಮಾಲಿಕರ ಪ್ರತಿನಿಧಿಗಳು, ಕಾರ್ಮಿಕ ಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಸೇರಿ ಸಭೆಯನ್ನು ನಡೆಸಿ ಚರ್ಚಿಸಿ ಸಾಮಾಜಿಕ ಭದ್ರತೆಗೆ ಅಗತ್ಯ ನಿರ್ಧಾರ ಕ್ರಮ ಕೈಗೊಳ್ಳುತ್ತಾರೆ ಎಂದರು.
ಇಲಾಖೆ ವತಿಯಿಂದ ಸರ್ಕಾರದ ಒಟ್ಟು ೧೩ ವಿವಿಧ ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರಿಗೆ ವಿತರಿಸುತ್ತಿದ್ದೇವೆ, ೫ ಲಕ್ಷ ರೂವರೆಗೆ ಅಪಘಾತ ಪರಿಹಾರ ಸೌಲಭ್ಯ, ೬೦ ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ದೊರೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿ ಸುರೇಶ್ ಹಿರಿಯ ಕಾರ್ಮಿಕ ನಿರೀಕ್ಷಕರಾದ ಹೆಚ್.ಕೆ.ಪ್ರಭಾಕರ್, ಪ್ರವೀಣ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಪ್ರವೀಣ್ಕುಮಾರ್, ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.
Free Equipment Kit Distribution Program