ಚಿಕ್ಕಮಗಳೂರು: ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹುಮುಖ್ಯವಾದುದು. ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರಾಣ ಮುಡಿಪಾಗಿಟ್ಟ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಚಿಕ್ಕಮಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರು ಹೇಳಿದರು.
ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಸ್ಮಾರಕ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದ ರಕ್ಷಣೆ, ಜನರ ನೆಮ್ಮದಿಗಾಗಿ ಹಾಗೂ ಉತ್ತಮ ಆಡಳಿತ ಕಟ್ಟಿಕೊಡುವಲ್ಲಿ ಪೊಲೀಸರು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ನಮ್ಮ ರಕ್ಷಣೆ ಮಾಡುವ ಸಂದರ್ಭದಲ್ಲಿ ಹೋರಾಡಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು.
ಪೊಲೀಸ್ ಜೀವನ ಕಷ್ಟಕರವಾದರೂ ಕೆಲವೊಮ್ಮೆ ಜೀವ ಲೆಕ್ಕಿಸದೆ ತಮ್ಮ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತಾರೆ, ದೇಶದ ರಕ್ಷಕರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನಾಗರೀಕ ಆಸ್ತಿ-ಪಾಸ್ತಿ ರಕ್ಷಣೆ, ಅಪರಾಧ ತಡೆ ಹಾಗೂ ಹಲವು ಕರ್ತವ್ಯ ಪಾಲನೆಗಳಲ್ಲಿ ಸದಾ ನಿರತರಾಗಿ ಸಮಾಜದ ಸುರಕ್ಷತೆಗಾಗಿ ಪೊಲೀಸರು ದುಡಿಯುತ್ತಿದ್ದಾರೆ ಎಂದರು.
ಸಮಾಜದಲ್ಲಿ ಅನೇಕ ಅಪರಾಧ ಚಟುವಟಿಕೆಗಳು, ಸಂಘರ್ಷಗಳು ನಡೆಯುತ್ತಿದ್ದು ಕರ್ತವ್ಯ ನಿರತ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ, ನಮ್ಮ ಸಂವಿಧಾನ ಹಾಗೂ ಕಾಯ್ದೆ, ಕಾನೂನುಗಳು ಪ್ರತಿಯೊಬ್ಬರು ಅರಿತು ಪಾಲಿಸಿದ್ದೆ ಆದಲ್ಲಿ ಸಂಘರ್ಷ ಮತ್ತು ಅಪರಾಧಗಳನ್ನು ತಡೆಯಬಹುದು, ಇವುಗಳ ತಡೆಗಟ್ಟುವಲ್ಲಿ ಪೊಲೀಸರು ಅವರ ಕುಟುಂಬಗಳನ್ನು ಮರೆತು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಕರ್ತವ್ಯ ನಿಷ್ಠೆ ಮೆರೆಯುವ ಪ್ರತಿಯೊಬ್ಬ ಪೊಲೀಸರನ್ನು ಸ್ಮರಿಸಿ ಗೌರವಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ ಮಾನವ ಮತ್ತು ಸಮಾಜದ ನಡುವಿನ ಸಂಘರ್ಷದಿಂದಾಗಿ ಪೊಲೀಸ್ ಹುತಾತ್ಮರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ, ೧೯೫೯ರ ಚೀನಾ ಯುದ್ಧದಲ್ಲಿ ವೀರ ಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ.
ಪೊಲೀಸರು ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಕ್ಷಣೆ ಸಂದರ್ಭದಲ್ಲಿ ಹೋರಾಡಿ ಜೀವನ ತ್ಯಾಗ ಮಾಡಿದ ಪೊಲೀಸರಿಗೆ ಗೌರವ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಈ ವರ್ಷ ತಮ್ಮ ಕಾರ್ಯದಲ್ಲಿ ಶೂರತನದಿಂದ ಹೋರಾಡಿ ದೇಶದಾದ್ಯಂತ ೨೧೬ ಜನ ಪೊಲೀಸರು ತಮ್ಮ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಹುತಾತ್ಮರ ಹೆಸರು ಹೇಳುವ ಮೂಲಕ ಸ್ಮರಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ. ಜೆ, ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯ ಮಾನ್ಯರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷೆ ಅನುಮಧುಕರ್, ದಲಿತ ಸಂಘದ ಮುಖಂಡ ಕೆ.ಟಿ. ರಾಧಕೃಷ್ಣ, ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಶ್ ಪಿ. ಹಾಗೂ ವಿವಿಧ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು
It is our duty to remember the policemen who laid down their lives