ಚಿಕ್ಕಮಗಳೂರು: ರೈತರ ಹಿತವೇ ದೇಶದ ಹಿತ, ಸರ್ಕಾರವು ಕೃಷಿ ಚಟುವಟಿಕೆಗಳ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಕೃಷಿ ಇಲಾಖೆ ವತಿಯಿಂದ ನಗರದ ಜಂಟಿ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ಇಂದು ೨೦೨೪-೨೫ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಡಿ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಉಪಕರಣಗಳ ವಿತರಣೆ ಮಾಡಿ ಅವರು ಮಾತನಾಡಿದರು.
ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ದೇಶದ ಬಹುಪಾಲು ಜನರು ಕೃಷಿ ಅವಲಂಬಿತರಾಗಿದ್ದಾರೆ. ಶೇ ೫೦ ಕ್ಕಿಂತಲೂ ಹೆಚ್ಚು ಭೌಗೋಳಿಕ ಪ್ರದೇಶವು ಮಳೆ ಅವಲಂಬಿತ ಕೃಷಿ ಭೂಮಿಯಾಗಿದ್ದು, ಅತಿವೃಷ್ಠಿ, ಅನಾವೃಷ್ಠಿಯಂತ ಹವಾಮಾನ ವೈಪರಿತ್ಯದಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬೆಳೆಹಾನಿಯಾಗಿದೆ. ಬೆಳೆ ಹಾನಿಯಾಗಿರುವ ರೈತರನ್ನು ಗುರುತಿಸಿ ಪರಿಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಲವಾರು ಮಳೆ ಆಶ್ರಿತ ಕೃಷಿ ಬೆಳೆಗಳಿದ್ದು, ಮಳೆಯ ಕೊರತೆಯಿಂದಾಗಿ ರೈತರು ಕಡಿಮೆ ಇಳುವರಿ ಅಥವಾ ಬೆಳೆಯನ್ನು ಕಳೆದುಕೊಳ್ಳುವ ಸಂದಿಗ್ದ ಪರಿಸ್ಥಿತಿಗಳು ಉಂಟಾಗುತ್ತಿವೆ.
ಈ ಜ್ವಲಂತ ಸಮಸ್ಯೆಯನ್ನು ಪರಿಹರಿಸಲು ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪುಗೊಳಿಸುವ ಉದ್ದೇಶದಿಂದ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕೃಷಿ ಭೂಮಿಗೆ ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ ಸಂದಿಗ್ದ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಒದಗಿಸುವ ಮೂಲಕ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ ಎಂದರು.
ರೈತರು ಕೃಷಿ ಜೊತೆಗೆ ಕೃಷಿ ಉಪಕಸುಬುಗಳಲ್ಲಿ ತೊಡಗಿಕೊಳ್ಳುವುದು ಉತ್ತಮವಾಗಿದೆ. ಉಪಕಸುಬುಗಳಿಂದ ಬರುವ ಆದಾಯವು ಕೃಷಿ ಮತ್ತು ಇನ್ನಿತರ ಕಾರ್ಯಗಳಿಗೆ ವ್ಯಯಿಸಬಹುದು. ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ಬೀಜ ಹಾಗೂ ವಿವಿಧ ತಳಿಗಳ ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ. ರೈತರು ತಮ್ಮ ಕೃಷಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವುದರ ಮೂಲಕ ಉತ್ತಮ ಇಳುವರಿ ಪಡೆಯಬೇಕು. ರೈತರ ಹಿತಕ್ಕಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಮಾಹಿತಿ ಪಡೆದು ಯೊಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಮಕ್ಕಳ ಉತ್ತಮ ಶಿಕ್ಷಣಕ್ಕೆ ಒತ್ತು ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಟ್ಟು ಆರ್ಥಿಕವಾಗಿ ಸಧೃಡರಾಗಿ ಎಂದರು.
ಕೃಷಿ ಇಲಾಖೆ ಜಂಟಿ ಉಪನಿರ್ದೇಶಕಿ ಸುಜಾತಾ ಮಾತನಾಡಿ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್ ಸೆಟ್, ಲಘು ನೀರಾವರಿ ಹಾಗೂ ತಂತಿ ಬೇಲಿಯಂತಹ ಒಟ್ಟಾರೆ ೦೬ ಕಡ್ಡಾಯ ಪಾಕೇಜ್ ರೂಪದ ಘಟಕಗಳಿವೆ. ಕನಿಷ್ಠ ಒಂದು ಎಕರೆ ಸಾಗುವಳಿ ಭೂಮಿ ಹೊಂದಿರುವ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಕಸಬಾ ಹೋಬಳಿಯ ಅಲ್ಲಂಪುರ, ಬೀಕನಹಳ್ಳಿ, ಬಾಳೆಹಳ್ಳಿ, ಹುಳಿಯಾರಹಳ್ಳಿ, ಕರ್ಕಿಪೇಟೆ, ಬಿಳೇಕಲ್ಲು, ಹಂಪಾಪುರ, ಐನಹಳ್ಳಿ ಸೇರಿದಂತೆ ಮೊದಲಾದ ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಪ್ರದೇಶದ ಸುಮಾರು ೨೫೦ ಕ್ಕೂ ಹೆಚ್ಚು ರೈತರು ಕೃಷಿ ಚಟುವಟಿಕೆಗಳನ್ನು ಅಳವಡಿಸಿಕೊಂಡಿದ್ದು, ಬಡ ರೈತರ ಸುಸ್ಥಿರ ಕೃಷಿಗೆ ಈ ಯೋಜನೆ ಸಹಕಾರಿಯಾಗಿದೆ. ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಬೇಕಾದ ಮಾರ್ಗದರ್ಶನ ಮತ್ತು ವೈಜ್ಞಾನಿಕ ವಿಧಾನಗಳನ್ನು ವಿವಿಧ ತರಬೇತಿಗಳ ಮೂಲಕ ರೈತರಿಗೆ ನೀಡಲಾಗುತ್ತಿದೆ ಎಂದ ಅವರು ರೈತರು ಇಲಾಖೆಯಿಂದ ದೊರಕುವ ಸೌಲಭ್ಯಗಳ ಮಾಹಿತಿ ಪಡೆದು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿ ಉತ್ತಮ ಜೀವನ ನಿರ್ವಹಿಸಬೇಕೆಂದು ಹೇಳಿದರು.
ವಿತರಣಾ ಕಾರ್ಯಕ್ರಮದ ಜೊತೆಗೆ ಶಾಸಕರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಪೋನ್ ಇನ್ ಕಾರ್ಯಕ್ರಮದ ಮೂಲಕ ಸುಮಾರು ೪೪೦೦ ರೈತರೊಂದಿಗೆ ಸಂವಾದ ನಡೆಸಿ ಯೋಜನೆಯ ಉದ್ದೇಶ ಹಾಗೂ ಅರ್ಹತೆಯ ಮಾಹಿತಿ ಒದಗಿಸಿ ಅವರ ಸಮಸ್ಯೆ ಆಲಿಸಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಸಹಾಯಕ ಕೃಷಿ ನಿರ್ದೇಶಕಿ ಸುಜಾತ.ಸಿ, ಸಹಾಯಕ ಕೃಷಿ ನಿರ್ದೇಶಕರಾದ ವೆಂಕಟೇಶ್ ಚೌಹಾಣ್, ತಿಮ್ಮೆಗೌಡ ಪಾಟೀಲ್, ತಾಂತ್ರಿಕ ಅಧಿಕಾರಿ ಶ್ರೀ ಸೈಲಾ, ಅರ್ಪಿತಾ, ಕೃಷಿ ಅಧಿಕಾರಿ ಶರ್ಮ, ಇಂದ್ರಕುಮಾರ್. ವಿಶ್ವಾಸ್, ಗೀತಾ ಸೇರಿದಂತೆ ವಿವಿಧ ಹೋಬಳಿ ಕೃಷಿ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.
Distribution of agricultural implements to farmers