ಚಿಕ್ಕಮಗಳೂರು: ಮಳೆಯಿಂದ ಹಾನಿಯಾಗಿರುವ ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿ ಹಾನಿಯಾಗಿರುವ ಕಟ್ಟಡಗಳ ದುರಸ್ತಿಗೆ ಕೂಡಲೆ ಕ್ರಮವಹಿಸುವಂತೆ ಈಗಾಗಲೇ ಸೂಚಿಸಿದೆ. ದುರಸ್ತಿ ಆಗದಿರುವ ಕಟ್ಟಡಗಳ ದುರಸ್ತಿಗೆ ಕ್ರಮವಹಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆಯಿಂದ ಶಾಲಾ, ಕಾಲೇಜು, ಅಂಗನವಾಡಿ ಕಟ್ಟಡಗಳು ಹಾಗೂ ಮೇಲ್ಛಾವಣಿಗಳು ಶಿಥಿಲಗೊಂಡು ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆಯಾಗುವಂತಿದ್ದರೆ ಅಂತಹ ಶಾಲಾ ಕಟ್ಟಡಗಳನ್ನು ಗುರುತಿಸಿ ಶೀಘ್ರವಾಗಿ ಕೊಠಡಿಗಳ ದುರಸ್ತಿಗೊಳಿಸಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಿ ಕೊಡಬೇಕು ಎಂದರು.
ಜಿಲ್ಲೆಯಲ್ಲಿನ ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಕೆರೆಗಳನ್ನು ಸರ್ವೆ ಮಾಡಿ ಒತ್ತುವರಿಯಾಗಿರುವ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕೆರೆಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿರುವುದಿಲ್ಲ. ಕೂಡಲೇ ಕೆರೆಗಳ ಮತ್ತು ಕಾಲುವೆಗಳ ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸಿ ಕೆರೆ ಗಡಿ ಭಾಗದಲ್ಲಿ ಕಾಲುವೆ ನಿರ್ಮಿಸಿ ಬಯೋಫೆನ್ಸಿಂಗ್ ಆಳವಡಿಸಿ ಕೆರೆಗಳ ಸಂರಕ್ಷಣೆಗೆ ಕ್ರಮವಹಿಸಬೇಕು ಎಂದ ಅವರು ಭಾರಿ ಮಳೆಯಿಂದ ಹಾನಿಯಾಗಿರುವ ರಸ್ತೆಗಳನ್ನು ಬಾಕ್ಸ್ ಮಾದರಿಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಬೇಕು. ಕಾಫಿ ಬೆಳೆ ಇಳುವರಿ ಕಡಿಮೆಯಾಗುತ್ತಿದ್ದು, ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ನಡೆಸಿ ಹೊಸ ಕಾಫಿ ತಳಿಯನ್ನು ರೈತರಿಗೆ ವಿತರಿಸಿ ಉತ್ಪಾದನಾ ಪ್ರಮಾಣ ಹಾಗೂ ರಫ್ತು ಪ್ರಮಾಣ ಹೆಚ್ಚಿಸಲು ಕಾಫಿ ಮಂಡಳಿ ಕ್ರಮವಹಿಸಬೇಕು ಎಂದರು.
ನಾಡ ಕಛೇರಿ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಕಛೇರಿಗಳು ಕಡತಗಳನ್ನು ಕಡ್ಡಾಯವಾಗಿ ಇ-ಆಫೀಸ್ ಮೂಲಕವೇ ನಿರ್ವಹಣೆ ಮಾಡಬೇಕು. ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಾಗೂ ರಾಜ್ಯ ಮಟ್ಟಕ್ಕೆ ಕಳುಹಿಸುವ ಕಡತಗಳ ಪತ್ರಗಳು ಸಹ ಇ-ಆಫೀಸ್ ಮೂಲಕವೇ ಕಳುಹಿಸಬೇಕು. ಇದರಿಂದ ಕಡಿಮೆ ಕಾಗದ ಬಳಕೆ ಹಾಗೂ ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಲ್ಲದೇ, ಕಡತಗಳು ಸುರಕ್ಷಿತವಾಗಿರುತ್ತವೆ ಎಂದ ಅವರು. ಜಿಲ್ಲೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ ಭೂಮಿ ಆರ್ಟಿಸಿ ಯಲ್ಲಿ ಇಂಡೀಕರಣ ಆಗಿದೆಯೇ, ಪೂರ್ಣ ಜಾಗ ಇಲಾಖೆ ವಶದಲ್ಲಿದೆಯೇ, ಒತ್ತುವರಿಯಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗವನ್ನು ರಕ್ಷಣೆ ಮಾಡಬೇಕೆಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಒಟ್ಟು ೧೩೮೭ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಶಾಲಾ ಕಟ್ಟಡಗಳ ಸುರಕ್ಷತೆ ಮತ್ತು ಅಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ ದುರಸ್ತಿ ಅಗತ್ಯವಿರುವ ಕಟ್ಟಡಗಳು ಹಾಗೂ ಮೇಲ್ಛಾವಣಿಗಳನ್ನು ದುರಸ್ತಿಗೊಳಿಸಲು ಕ್ರಮವಹಿಸಲಾಗಿದೆ ಎಂದ ಅವರು ಬೋಧನೆಗೆ ಸುಸ್ಥಿತಿಯಲ್ಲಿರುವ ಕೊಠಡಿಗಳನ್ನು ಮಾತ್ರ ಬಳಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ೧೭೨೯ ಕೆರೆಗಳಿದ್ದು, ೭೬೧ ಕೆರೆಗಳ ಒತ್ತುವರಿಯನ್ನು ಗುರುತಿಸಲಾಗಿದೆ. ಇವುಗಳಲ್ಲಿ ೨೫೯ ಕೆರೆಗಳನ್ನು ಒತ್ತುವರಿಯಿಂದ ತೆರವುಗೊಳಿಸಿ ಕೆರೆಯ ಸುತ್ತ ಬಯೋಫೆನ್ಸಿಂಗ್ ಆಳವಡಿಸಿ ಸಂರಕ್ಷಿಸಲಾಗುತ್ತಿದೆ. ಬಾಕಿ ಇರುವ ೫೦೨ ಕೆರೆಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಈ ಬಾರಿ ಮಳೆಯಿಂದ ಹಾನಿಯಾಗಿರುವ ೨೬ ರಸ್ತೆ ಕಾಮಗಾರಿಗಳಲ್ಲಿ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಮತ್ತು ಸೇತುವೆ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ ಎಂದ ಅವರು ಹೆಚ್ಚು ಮಳೆಯಿಂದಾಗಿ ಉಂಟಾದ ರಸ್ತೆ ಗುಂಡಿಗಳನ್ನು ಬಾಕ್ಸ್ ಮಾದರಿಯಲ್ಲಿ ಕತ್ತರಿಸಿ ಡಾಂಬರ್ನಿಂದ ಮುಚ್ಚಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಪಶುಗಳಿಗೆ ಮೇವು ಬೆಳೆದು ನೀಡಲಾಗುತ್ತದೆ. ಅದೇ ರೀತಿ ಅಮೃತ್ ಮಹಲ್ ಕಾವಲ್ನಲ್ಲಿ ಹಾಗೂ ಜಿಲ್ಲೆಯ ಸರ್ಕಾರಿ ಭೂಮಿಗಳಲ್ಲಿ ಮೇವು ಬೆಳೆದು ವಿತರಿಸಲು ಕ್ರಮವಹಿಸುವಂತೆ ತಿಳಿಸಿದ ಅವರು. ವಿದ್ಯಾರ್ಥಿನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಹಾಗೂ ಜಿ.ಪಂ. ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Notice for repair of damaged school-anganawadi buildings