ಚಿಕ್ಕಮಗಳೂರು: ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಥಳ ಗುರುತಿಸಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ೧೯೮೯ ತಿದ್ದುಪಡಿ ನಿಯಮಗಳು ೨೦೧೩ರಂತೆ ನಿಯಮ ೧೭ (ಎ) ಚಿಕ್ಕಮಗಳೂರು ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹೊಣೆ ಆಯಾ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವಂತೆ ತಿಳಿಸಿದ ಅವರು. ಈ ಯೋಜನೆಗಳ ಕುರಿತ ಮಾಹಿತಿಯನ್ನು ಸಮುದಾಯದ ಜನರಿಗೆ ತಲುಪಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದ ಅವರು ರುದ್ರಭೂಮಿಗೆ ಸಂಬಂಧಿಸಿದಂತೆ ಸ್ಥಳ ಗುರುತಿಸಿ ರುದ್ರಭೂಮಿಗೆ ಜಮೀನು ಒದಗಿಸಲು ಕ್ರಮವಹಿಸಲಾಗುವುದು ಎಂದರು.
ಚಿಕ್ಕಮಗಳೂರು ತಹಸೀಲ್ದಾರ್ ಸಭೆಗೆ ಮಾಹಿತಿ ನೀಡಿ ಕುರುವಂಗಿ ಗ್ರಾಮದ ಸರ್ವೆ ನಂಬರ್ ೪೨/೦೧ ರಲ್ಲಿ ಸ್ಮಶಾನಕ್ಕೆ ಮೂರು ಎಕರೆ ಜಮೀನು ಮಂಜೂರು ಆಗಿದ್ದು, ಸ್ಥಳ ಪರಿಶೀಲಿಸಲಾಗಿ ಸದರಿ ಸ್ಥಳದಲ್ಲಿ ಯಾವುದೇ ಒತ್ತುವರಿಯಾಗಿರುವುದು ಕಂಡು ಬಂದಿರುವುದಿಲ್ಲ ಎಂದ ಅವರು ೨೦೨೪-೨೫ನೇ ಸಾಲಿನಲ್ಲಿ ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಶೇ ೯೦ ರಷ್ಟು ಹಾನಿಯಾದ ಮನೆಗಳ ಸಂತ್ರಸ್ತರಿಗೆ ಎಸ್ ಡಿ ಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಪರಿಹಾರ ಧನ ಪಾವತಿಸಲು ಕ್ರಮವಹಿಸಲಾಗುತ್ತಿದೆ. ಸಾಗುವಳಿ ಚೀಟಿ ಇಲ್ಲದಿರುವ ಸಂತ್ರಸ್ತರಿಗೂ ಸಹ ಪರಿಹಾರ ಪಾವತಿಗಾಗಿ ಹಾಗೂ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿ ನೀಡುವ ಕುರಿತು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪ ತಾಲ್ಲೂಕು ತಹಸೀಲ್ದಾರ್ ಲಿಖಿತ, ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ವಿಜಯ್ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ ಹಾಗೂ ಅನುಸೂಚಿ ಜಾತಿ ಮತ್ತು ಅನುಸೂಚಿ ಬುಡಕಟ್ಟುಗಳ ದೌರ್ಜನ್ಯ ಸಮಿತಿಯ ಸದಸ್ಯರುಗಳಾದ ಹುಣಸೆಮಕ್ಕಿ ಲಕ್ಷ್ಮಣ, ರಾಜ ಶಂಕರ್, ಕೆ.ಎಂ. ರಾಮಣ್ಣ ಮುಂತಾದವರು ಹಾಜರಿದ್ದರು.
Revenue Sub-Division Level Awareness and Stewardship Committee Meeting