ಚಿಕ್ಕಮಗಳೂರು: ರೈತರ ಕೃಷಿ ಭೂಮಿಯನ್ನು ಇತರೆ ಉದ್ದೇಶಗಳಿಗೆ ಅನ್ಯಕ್ರಾಂತ ಮಾಡಲು ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ ಪಡೆಯಬೇಕೆಂಬ ನೂತನ ನಿಯಮವನ್ನು ಸರ್ಕಾರ ಕೂಡಲೇ ವಾಪಾಸ್ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರ ಕೃಷಿಭೂಮಿಯನ್ನು ಅನ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡುವಾಗ ಸ್ವಂತ ಕಟ್ಟಡ ಕಟ್ಟಲು ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಂದ ನಿರಾಪೇಕ್ಷಣಾ ಪ್ರಮಾಣಪತ್ರ ಪಡೆಯಲಾಗುತ್ತಿದ್ದು, ಈಗ ಹೊಸದಾಗಿ ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆಯಬೇಕೆಂಬುದು ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಆರೋಪಿಸಿದರು.
ಪಹಣಿ, ಮ್ಯೂಟೇಷನ್ ಸೇರಿದಂತೆ ಭೂಮಿಗೆ ಸೇರಿದ ಎಲ್ಲಾ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿದ್ದು, ಕಂದಾಯ ಇಲಾಖೆಗೆ ಸೇರಿದ ಜಮೀನಾಗಲೀ, ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಲಿ ಪಹಣಿ ಮ್ಯೂಟೇಷನ್ ಖಾತೆ ಮಾಡಿ ದಾಖಲಿಸುವ ಜವಾಬ್ದಾರಿ ಹಾಗೂ ದಾಖಲೆಗಳನ್ನು ಕಾಪಾಡುವ ಕರ್ತವ್ಯ ಕಂದಾಯ ಇಲಾಖೆಗೆ ಸೇರಿರುವುದರಿಂದ ಭೂದಾಖಲೆಗಳು ಡಿಜಿಟಲೀಕರಣವಾಗಿದೆ ಎಂದು ಸರ್ಕಾರದ ಸಚಿವರು ಹೇಳುತ್ತಿದ್ದಾರೆ ಎಂದರು.
ಎಲ್ಲಾ ಅಗತ್ಯ ದಾಖಲೆಗಳು ಅಂಗೈಯಲ್ಲಿ ಸಿಗುವ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿ ಯಾವುದು ಎಂದು ಕಂದಾಯ ಇಲಾಖೆಯ ಕಂಪ್ಯೂಟ್ನಲ್ಲಿ ದಾಖಲಾಗಿರುವಾಗ ಅರಣ್ಯ ಇಲಾಖೆಗೆ ಸಂಬಂಧಪಡದ ರೈತರ ಭೂಮಿ ಪರಿವರ್ತನೆಗೆ ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕೆಂಬುದು ಮತ್ತೊಂದು ಭ್ರಷ್ಟಾಚಾರಕ್ಕೆ ಕೇಂದ್ರವನ್ನು ಸೃಷ್ಟಿಸಿದಂತಿದೆ ಎಂದು ದೂರಿದರು.
ರೈತರ ಭೂಮಿಯನ್ನು ಅನ್ಯಕ್ರಾಂತ ಮಾಡಲು ಅರಣ್ಯ ಇಲಾಖೆಯವರು ಮನಬಂದಂತೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಬದಲು ಲಂಚದ ವಿಕೇಂದ್ರಿಕರಣ ಮಾಡಿದಂತಾಗಿದೆ. ಕಂದಾಯ ಇಲಾಖೆಗೆ ಸಂಬಂಧಪಟ್ಟ ಜಮೀನಿನ ಭೂಪರಿವರ್ತನೆಗೆ ಅರಣ್ಯ ಇಲಾಖೆಯ ನಿರಾಪೇಕ್ಷಣ ಪ್ರಮಾಣ ಪತ್ರ ಪಡೆಯಬೇಕೆಂಬ ನಿಯಮ ರೈತರಿಗೆ ಕಿರುಕುಳ ಕೊಡುವ ಉದ್ದೇಶದಿಂದಲೇ ಮಾಡಿದಂತಿದೆ ಎಂದು ಲೇವಡಿ ಮಾಡಿದರು.
ಭೂಪರಿವರ್ತನೆ ಮಾಡುವಾಗ ಕಡತದ ಜೊತೆಗೆ ಇಂತಿಷ್ಟು ಲಂಚ ಕೊಡಬೇಕೆಂಬ ಒಪ್ಪಂದ ಇದ್ದು, ಲಂಚ ಕೊಡದಿದ್ದರೆ ಕಡತ ಮುಂದಕ್ಕೆ ಚಲಿಸುವುದೇ ಇಲ್ಲ. ಈ ಎಲ್ಲಾ ಕಾರಣದಿಂದಾಗಿ ನೂತನವಾಗಿ ಆದೇಶ ಮಾಡಿರುವ ನಿಯಮವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಬಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ಬಸವರಾಜು, ತಾಲ್ಲೂಕು ಅಧ್ಯಕ್ಷ ವೈ.ಸಿ.ಸುನಿಲ್ ಕುಮಾರ್, ಪರ್ವತೇಗೌಡ ಉಪಸ್ಥಿತರಿದ್ದರು.
Demand to drop forest department’s no-nonsense letter to alienate farmers’ land