ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಇವರಿಂದ ಪಕ್ಷದ ಕಾರ್ಯಕರ್ತರು, ಮುಖಂಡರ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಕುಗ್ಗಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಉಪ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯಧ್ಯಕ್ಷರ ವಿರುದ್ಧ ಬಾಯಿಗೆ ಬಂದಂತೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೊಂದಿಗೆ ಅಸಮದಾನವಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು, ಅದನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ಹೇಳಿಕೆಗಳನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದ ಅವರು, ಈ ಸಂಬಂಧ ಕೇಂದ್ರ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಎಂದು ಸಲಹೆ ನೀಡಿದರು.
ಹೊಂದಾಣಿಕೆ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿರುವ ನೀವು ಯಾವುದೇ ನಾಯಕರುಗಳು ಹೊಂದಾಣಿಕೆಯನ್ನು ಮಾಡಿಕೊಳ್ಳಬಾರದು. ಅದೇ ರೀತಿ ನೀವೂ ಸಹ ಬಿಜಾಪುರ ಜಿಲ್ಲೆಯಲ್ಲಿ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಹಾಗೂ ಬಬುಲೇಶ್ವರ ಕ್ಷೇತ್ರದಲ್ಲಿ ಎಂ.ಬಿ ಪಾಟೀಲ್ರನ್ನು ಹೊಗಳಿ ಬಿಜೆಪಿ ಅಭ್ಯರ್ಥಿ ವಿಜುಗೌಡರ ಸೋಲಿಗೆ ಕಾರಣರಾಗಿದ್ದೀರಿ ಎಂದು ಟೀಕಿಸಿದರು.
ಭ್ರಷ್ಟಾಚಾರದ ಬಗ್ಗೆ ಧ್ವನಿಎತ್ತಿರುವ ತಾವು ಬಿಜಾಪುರ ಜಿಲ್ಲೆಯಲ್ಲಿ ಶೇ. ೧೪ ರಷ್ಟು ಹಣವನ್ನು ಪಡೆದವರು ಯಾರು ಎಂದು ಬಹಿರಂಗಪಡಿಸುವಂತೆ ಒತ್ತಾಯಿಸಿದ ಕಲ್ಮರುಡಪ್ಪ, ಬಿಜೆಪಿ ನಿಮಗೆ ಎಲ್ಲಾ ರೀತಿಯ ಅಧಿಕಾರವನ್ನು ನೀಡಿ ಕೇಂದ್ರ ಸಚಿವರನ್ನಾಗಿ ಮಾಡಿದ್ದರೂ ಪಕ್ಷ ತೊರೆದು ನಂತರ ಯಡಿಯೂರಪ್ಪ ನೇತೃತ್ವದಲ್ಲಿ ಪುನಹಾ ಬಿಜೆಪಿ ಸೇರಿದ್ದು, ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಇದೇ ರೀತಿ ನಿಮ್ಮ ವರ್ತನೆ ಮುಂದುವರೆದರೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಯತ್ನಾಳ್ ವಿರುದ್ಧ ಪೊರಕೆ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರರಾದ ಸಿ.ಹೆಚ್ ಲೋಕೇಶ್, ಹೆಚ್.ಎಸ್ ಪಟ್ಟಸ್ವಾಮಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್ ಉಪಸ್ಥಿತರಿದ್ದರು.
Demand action against Yatnal who is making anti-party statement