ಚಿಕ್ಕಮಗಳೂರು: ಮಲೆನಾಡಿನ ಜನರಿಗೆ ತೂಗುಕತ್ತಿಯಾಗಿರುವ ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯ ಸರ್ಕಾರ ತಿರಸ್ಕರಿಸಿದ್ದು, ಮಲೆನಾಡಿನ ಸಮಸ್ಯೆಯನ್ನು ವಿಷಯವಾಗಿ ಇಟ್ಟುಕೊಂಡು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕರು, ಸಚಿವರು, ಚರ್ಚಿಸುವಂತೆ ಆಗ್ರಹಿಸಿ ಡಿ.೫ ರಿಂದ ವಿವಿಧ ಹಂತದ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ ಕುಮಾರ್ ಒತ್ತಾಯಿಸಿದರು.
ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿಯಂತೆ ೨೦,೬೦೦ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಉಪಗ್ರಹ ಆಧಾರಿತ ಸರ್ವೇ ನಡೆಸಿದ್ದು, ಭೌತಿಕ ಸರ್ವೇ ನಡೆಸಿದರೇ ೪೦ ಸಾವಿರಕ್ಕೂ ಹೆಚ್ಚು ಚದರ ಕಿ.ಮೀ. ಅರಣ್ಯ ಪ್ರದೇಶ ಲಭ್ಯವಾಗಲಿದೆ. ಆದರೆ, ಭೌತಿಕ ಸರ್ವೇ ನಡೆಸಲು ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿರುವುದಾಗಿ ಹೇಳಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಯಾವುದೇ ದೃಢೀಕರಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇದರಿಂದ ಜನರಲ್ಲಿ ಆತಂಕ ಮೂಡಿಸಿದ್ದು, ತಕ್ಷಣ ರಾಜ್ಯ ಸರ್ಕಾರ ವರದಿ ತಿರಸ್ಕೃತ ದೃಢೀಕರಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಮನವಿ ಮಾಡಿದರು.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಭೌತಿಕ ಸರ್ವೇ ನಡೆಸಿ ಅರಣ್ಯ ಪ್ರದೇಶ, ಜನವಸತಿ ಹಳ್ಳಿಗಳ ಗಡಿಯನ್ನು ಗುರುತು ಮಾಡಬೇಕು. ಅಲ್ಲಿಯವರೆಗೂ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಅರಣ್ಯ ಸಚಿವರು ಹೇಳಿರುವಂತೆ ಈಗಾಗಲೇ ಇರುವ ಅಂದಾಜು ೧೬,೧೧೪ ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ತಂದು ಅರಣ್ಯ ಸಂರಕ್ಷಣೆ ಮಾಡಲಾಗುವುದು. ೧೫೦೦ ಗ್ರಾಮಗಳು ಬರುತ್ತವೆ. ಕೇಂದ್ರ ಸರ್ಕಾರದಿಂದ ಪರಿಹಾರ ಪ್ಯಾಕೇಜ್ ಕೇಳಲಾಗುವುದು ಎಂದು ಹೇಳಿದ್ದಾರೆ. ಆದರೆ, ಪ್ರಸ್ತಾಪಿತ ಭೂ ಪ್ರದೇಶ ಸಹ ಭೌತಿಕ ಸರ್ವೇ ಮುಖಾಂತರ ಹಳ್ಳಿಗಳ ಗಡಿ ಹಾಗೂ ಅರಣ್ಯ ವ್ಯಾಪ್ತಿಯನ್ನು ಗುರುತಿಸಿದರೇ ಮೂರು ಸಾವಿರಕ್ಕೂ ಹೆಚ್ಚು ಹಳ್ಳಿಗಳು ವ್ಯಾಪ್ತಿಯಲ್ಲಿ ಬರಲಿದೆ. ಈ ಹಿನ್ನಲೆಯಲ್ಲಿ ಹಳ್ಳಿಗಳ ಜನರಿಗೆ ತೊಂದರೆಯಾಗದಂತೆ ಹಳ್ಳಿಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿ, ಗ್ರಾಮಸ್ಥರ ರಕ್ಷಣೆ ಮಾಡಬೇಕು ಎಂದು ಹೇಳಿದರು.
ಸೆಕ್ಷನ್ ೪(೧) ಮೀಸಲು ಅರಣ್ಯ ಪ್ರಸ್ತಾವನೆಯಲ್ಲಿರುವ ಜಿಲ್ಲೆಯ ಅಂದಾಜು ೨೩೮ ಬ್ಲಾಕ್ಗಳ ಪೈಕಿ ನೂರಕ್ಕೂ ಹೆಚ್ಚು ಬ್ಲಾಕ್ಗಳು ೩೦ ರಿಂದ ೮೦, ೯೦ ವರ್ಷಗಳ ಹಿಂದಿನ ಪ್ರಸ್ತಾವನೆಯಾಗಿದ್ದು, ಲಕ್ಷಾಂತರ ಎಕರೆ ಕಂದಾಯ, ಗೋಮಾಳ, ಹುಲ್ಲುಬನಿ, ಕಂದಾಯ ಇಲಾಖೆ ಭೂಮಿಯನ್ನು ಅರಣ್ಯ ಭೂಮಿಯೆಂದು ಘೋಷಣೆ ಮಾಡಲಾಗಿದೆ. ಲಕ್ಷಾಂತರ ಕುಟುಂಬಗಳು ಸಮಸ್ಯೆಯಿಂದ ಬಳಲುತ್ತಿವೆ. ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು.
ಇದರಿಂದ ೯೪ಸಿ ಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ಲೀಸ್ ಕೊಡಲು ಇದು ತೊಡಕ್ಕಾಗುತ್ತಿದೆ. ಜಿಲ್ಲೆಯ ಲಕ್ಷಾಂತರ ಜನರಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸೆಕ್ಷನ್ ೪(೧) ಘೋಷಣೆಗೊಂಡು ಕನಿಷ್ಟ ಮೂರು ವರ್ಷದೊಳಗೆ ಪ್ರಕ್ರಿಯೆ ಆರಂಭಿಸಿ ಪ್ರಸ್ತಾವನೆಯನ್ನು ಕೈಬಿಡಬೇಕು. ಭೂ ಲಭ್ಯತೆಗೆ ಅನುಗುಣವಾಗಿ ಮೀಸಲು ಅರಣ್ಯ ಪ್ರಸ್ತಾವನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಡಿ.೯ ರಿಂದ ೨೦ ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ಜಿಲ್ಲಾಧ್ಯಂತ ಪ್ರತಿಭಟನೆ ನಡೆಸಿ, ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಲಾಗುವುದು ಎಂದ ಅವರು, ಜಿಲ್ಲಾ ಕೇಂದ್ರದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕೆ.ಕೆ. ರಘು, ಮುಖಂಡ ರವಿ ಇದ್ದರು.
Decided to conduct various levels of movement from December 5