ಚಿಕ್ಕಮಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ವರ್ಣದ ವಿಚಾರದಲ್ಲಿ ಅವಹೇಳನ ಮಾಡಿರುವುದಲ್ಲದೆ, ಒಕ್ಕಲಿಗ ಜನಾಂಗವನ್ನೇ ಕೊಂಡುಕೊಳ್ಳುತ್ತೇನೆ ಎನ್ನುವ ಅರ್ಥದಲ್ಲಿ ಮಾತನಾಡಿರುವ ರಾಜ್ಯದ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಜಮೀರ್ ಅಹಮದ್ ವಕ್ಫ್ ಸಚಿವರಾದ ನಂತರ ಇಡೀ ರಾಜ್ಯದಲ್ಲಿ ದ್ವೇಷಭಾವನೆಯನ್ನು ಬಿತ್ತಿದ್ದಾರೆ. ರೈತರು ಸೇರಿದಂತೆ ಎಲ್ಲಾ ಜಮೀನುಗಳನ್ನು ವಕ್ಫ್ಗೆ ಸೇರ್ಪಡಿಸುವುದಲ್ಲದೆ, ಕುಮಾರ ಸ್ವಾಮಿ ಅವರ ಕುಟುಂಬ ಹಾಗೂ ಅವರ ಬಣ್ಣದ ಬಗ್ಗೆ ಪುಡಿ ರೌಡಿ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಹಲ್ಲು ಕಚ್ಚುತ್ತಾ ನಮ್ಮ ವಕ್ಫ್ ಆಸ್ತಿಗಳು ಹಸಿರಾಗಿ ಕಾಣಬೇಕು, ಹಿಂದೂಗಳು ಹೊಟ್ಟೆ ಉರಿದುಕೊಳ್ಳಬೇಕು ಎನ್ನವ ರೀತಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರ ಚಾಲಕರಾಗಿ ಕೆಲಸ ಮಾಡಿದವರು, ಕುಮಾರಸ್ವಾಮಿ ಅವರ ಕೈ ಕಾಲುಗಳನ್ನು ಒತ್ತಿ ಶಾಸಕರಾದವರು ಇಂದು ಒಕ್ಕಲಿಗ ಜನಾಂಗದ ನಾಯಕರು, ಮಾಜಿ ಪ್ರಧಾನಿಗಳ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎಂದು ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಒಕ್ಕಲಿಗ ಜನಾಂಗ ದೇವೇಗೌಡರು, ಕುಮಾರಸ್ವಾಮಿ ಜೊತೆಗಿದೆ. ಎಲ್ಲರ ಬಳಿ ಭಿಕ್ಷೆ ಬೇಡಿ ಅವರನ್ನು ಕೊಂಡುಕೊಳ್ಳುತ್ತೇವೆ ಎಂದಿದ್ದೀರಿ. ಒಕ್ಕಲಿಗರು ಒಬ್ಬೊಬ್ಬರು ಮನಸ್ಸು ಮಾಡಿದರೆ ಜಮೀರ್ ಅವರ ಕುಟುಂಬವನ್ನು ಕೊಂಡುಕೊಳ್ಳುವ ಶಕ್ತಿ ಇದೆ. ಮುಂದೆ ಯಾವುದೇ ಜಿಲ್ಲೆಗೆ ಬಂದರೂ ನಿಮ್ಮ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ ಎಂದು ಎಚ್ಚರಿಸಿದರು.
ಜಮೀರ್ ಅಹಮದ್ ಅವರ ವರ್ತನೆಯನ್ನು ನೋಡಿದರೆ ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತಂತ್ರ ಇದ್ದಂತೆ ಕಾಣುತ್ತದೆ ಎಂದು ಚನ್ನಪಟ್ಟಣದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಅವಕಾಶವೂ ಹೆಚ್ಚಾಗಿದೆ. ನಿಖಿಲ್ ಪರ ಅನುಕಂಪ ಹೆಚ್ಚಾಗಿ ಡಿ.ಕೆ.ಶಿವಕುಮಾರ್ಗೆ ಹಿನ್ನಡೆಯಾಗಲಿ ಎನ್ನುವ ಸಂಚು ಸಿದ್ದರಾಮಯ್ಯ ಅವರು ಹೂಡಿರುವಂತೆ ಅನ್ನಿಸುತ್ತದೆ ಎಂದು ಹೇಳಿದರು.
ಈ ರೀತಿಯ ಸಂಚು ಮಾಡಿಲ್ಲ ಎನ್ನುವುದಾದರೆ ಕೂಡಲೇ ಜಮೀರ್ ಅಹಮದ್ರನ್ನು ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
Wakf Minister Zameer Ahmed Khan should be sacked from his post