ಚಿಕ್ಕಮಗಳೂರು: ದಿನನಿತ್ಯದ ಆಹಾರ ಪದ್ಧತಿಯಲ್ಲಿ ಹೆಚ್ಚು ಸಿರಿ ಧಾನ್ಯ ಪದಾರ್ಥಗಳನ್ನು ಬಳಸುವುದರಿಂದ ಅನೇಕ ರೋಗ ರುಜಿನಗಳಿಂದ ಮುಕ್ತರಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರದಲ್ಲಿ ಇಂದು ನಗರದ ತಾಲ್ಲೂಕು ಕಛೇರಿಯಿಂದ ಜಿಲ್ಲಾಧಿಕಾರಿ ಕಛೇರಿ ಆವರಣದವರೆಗೆ ಆಯೋಜಿಸಿದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸುವ ಪ್ರಯುಕ್ತ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಸಿರಿಧಾನ್ಯದ ಮಹತ್ವ ಹೆಚ್ಚುತ್ತಿದೆ. ಭಾರತವು ಸಿರಿಧಾನ್ಯಗಳ ತವರೂರಾಗಿದೆ. ಜಗತ್ತಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಪೈಕಿ ಶೇ ೪೨ರಷ್ಟು ಸಿರಿಧಾನ್ಯವನ್ನು ನಮ್ಮ ದೇಶದಲ್ಲೇ ಬೆಳೆಯಲಾಗುತ್ತಿದ್ದು, ಸಿರಿಧಾನ್ಯ ಬೆಳೆಯುವಲ್ಲಿ ನಮ್ಮ ರಾಜ್ಯ ಮುಂದಿದೆ ಎಂದು ತಿಳಿಸಿದರು.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಅತ್ಯುತ್ತಮ ಔಷಧಿಯಾಗಿದೆ ಬಹಳ ಕಡಿಮೆ ನೀರಿನಲ್ಲೂ ಸಿರಿಧಾನ್ಯವನ್ನು ಬೆಳೆಯಬಹುದಾಗಿದೆ. ರೋಗಮುಕ್ತ ಜೀವನಕ್ಕಾಗಿ ಎಲ್ಲರೂ ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು. ಸಿರಿಧಾನ್ಯಗಳು ಭೂಮಿಗೂ ವರದಾನ, ಆರೋಗ್ಯಕ್ಕೂ ವರದಾನ
ಅತ್ಯಧಿಕವಾದ ನಾರಿನ ಅಂಶ ಸೇರಿದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸತ್ವಗಳು, ಪ್ರೋಟೀನ್, ಕ್ಯಾಲ್ಶಿಯಂ ಮತ್ತು ಕಬ್ಬಿಣದ ಅಂಶಗಳು, ಶಕ್ಕರ, ಪಿಸ್ತಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ.
ಜೀವನಶೈಲಿ ಆಧಾರಿತ ಕೆಲವು ರೋಗಗಳಿಗೂ ಇದು ಉತ್ತಮ ಮದ್ದಾಗಿದೆ. ಆಹಾರದಲ್ಲಿ ಹೆಚ್ಚಾಗಿ ಸಿರಿಧಾನ್ಯವನ್ನು ಬಳಸಬೇಕು. ಸಿರಿಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದ ಅವರು ನಮ್ಮ ರೈತರು ಸಾವಯವ ಹಾಗೂ ಮಿಶ್ರ ಬೇಸಾಯ ಪದ್ಧತಿಯನ್ನು ರೂಢಿಸಿಕೊಂಡು ಸಿರಿಧಾನ್ಯವನ್ನು ಹೆಚ್ಚು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಸಾರ್ವಜನಿಕರು ಪಾಶ್ಚಾತ್ಯ ಆಹಾರ ಪದ್ಧತಿಗಳಿಗೆ ಮರುಳಾಗಿ ನಮ್ಮ ನಾಡಿನ ಆಹಾರ ಪದ್ಧತಿಯನ್ನು ದೂರ ಮಾಡಿ ಆರೋಗ್ಯವನ್ನು ಹದಗೆಟ್ಟಿಸಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿ ಮೂಲಕ ಬೆಳೆಯುವ ನವಣೆ, ಸಜ್ಜೆ, ರಾಗಿ ಹಾಗೂ ದ್ವಿದಳ ಧಾನ್ಯಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿಯಾಗಿವೆ. ಇವುಗಳ ಉಪಯೋಗದಿಂದ ರೈತರ ಬೆಳೆಗೂ ಉತ್ತಮ ಲಾಭದಾಯಕ ಬೆಲೆ ದೊರಕುತ್ತದೆ ಎಂದ ಅವರು ತಮ್ಮ ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳಿಂದ ಮಾಡಿದ ಆಹಾರವನ್ನು ಹೆಚ್ಚಾಗಿ ಬಳಸಿ ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಜಂಟಿ ಕೃಷಿ ನಿರ್ದೇಶಕಿ ಸುಜಾತ, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ ಬಿ.ಹೆಚ್. ಹರೀಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ವಿವಿಧ ಕಾಲೇಜು ವಿದ್ಯಾರ್ಥಿನಿಯರು ಹಾಗೂ ರೈತರು ಉಪಸ್ಥಿತರಿದ್ದರು.
Cereal Walk Program