ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ನೂತನ ಉಪಾಧ್ಯಕ್ಷರಾಗಿ ಹೆಚ್.ಬಿ. ಸತೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಬೆಳಗ್ಗೆ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಸ್ಪರ್ಧೆ ಇಲ್ಲದ ಕಾರಣ ಆಡಳಿತ ಮಂಡಳಿಯ ನಿರ್ದೇಶಕರ ಒಮ್ಮತದ ಅಭ್ಯರ್ಥಿಯಾಗಿ ಹೆಚ್.ಬಿ ಸತೀಶ್ ರವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಪ ವಿಭಾಗಾಧಿಕಾರಿ ದಲ್ಜಿತ್ಕುಮಾರ್, ಘೋಷಣೆ ಮಾಡಿದರು.
ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್, ಬ್ಯಾಂಕಿನ ಆಡಳಿತ ಮಂಡಳಿಯ ಒಮ್ಮತದ ಅಭ್ಯರ್ಥಿಯಾಗಿ ಹೆಚ್.ಬಿ ಸತೀಶ್ ರವರು ಅವಿರೋಧ ಆಯ್ಕೆಯಾಗಿದ್ದು, ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ಎಂ.ಎಸ್. ನಿರಂಜನ್ ಮಾತನಾಡಿ, ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳು ಪ್ರೀತಿ, ವಿಶ್ವಾಸ, ಒಮ್ಮತದಿಂದ ಆಯ್ಕೆಮಾಡಬೇಕೆಂಬ ನಿರ್ಧಾರಕ್ಕೆ ಬದ್ಧರಾಗಿ ನೂತನ ಉಪಾಧ್ಯಕ್ಷ ಹೆಚ್.ಬಿ ಸತೀಶ್ ಅವರನ್ನು ಅವಿರೋಧ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ಬಹಳ ವರ್ಷಗಳಿಂದ ಸತೀಶ್ ಅವರು ವಿವಿಧ ಸಹಕಾರ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಉತ್ತಮ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಬಿ ಸತೀಶ್ರವರು ಮಾತನಾಡಿ, ಈ ಸ್ಥಾನಕ್ಕೆ ನನ್ನನ್ನು ಅವಿರೋಧ ಆಯ್ಕೆ ಮಾಡಿದ ಅಧ್ಯಕ್ಷರೂ, ಎಲ್ಲಾ ನಿರ್ದೇಶಕರಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಳೆದ ೨೧ ವರ್ಷಗಳಿಂದ ಕೆಳಗೂರು ಸಹಕಾರ ಸಂಘದ ನಿರ್ದೇಶಕರಾಗಿ ಅಪಾರವಾದ ಅನುಭವದ ಆಧಾರದಲ್ಲಿ ಈ ಬಾರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷನಾಗಿದ್ದು, ಸಹಕಾರ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನನ್ನ ಆಯ್ಕೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ ಮತ್ತು ಕಾರ್ಯಕರ್ತರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎಸ್.ಜಿ ರಾಮಪ್ಪ, ಕೆ.ಆರ್. ಆನಂದಪ್ಪ, ಹೆಚ್.ಬಿ ಶಿವಣ್ಣ, ಡಿ.ಸಿ ಶಂಕರಪ್ಪ, ಎಸ್.ಎನ್ ರಾಮಸ್ವಾಮಿ, ಪರಮೇಶ್ವರಪ್ಪ, ಹೆಚ್.ವಿ ಸಂದೀಪ್, ಸಹಕಾರ ಸಂಘಗಳ ಉಪ ನಿಬಂಧಕರಾದ ತೇಜಸ್ವಿನಿ ಡಿ.ಎಸ್, ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪ.ಜಿ, ಬಿಜೆಪಿ ಮುಖಂಡರಾದ ಹೆಚ್.ಸಿ. ಕಲ್ಮರುಡಪ್ಪ, ಕೋಟೆ ರಂಗನಾಥ್, ಟಿ.ರಾಜಶೇಖರ್, ಕಾಂಗ್ರೆಸ್ ಮುಖಂಡ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
DCC Bank as the new Vice President H.B. Satish was the unopposed choice