ಚಿಕ್ಕಮಗಳೂರು: : ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಸಮಸ್ಯೆಗಳ ಇತ್ಯರ್ಥಕ್ಕೆ ಸಾರ್ವಜನಿಕರು ಹೆಚ್ಚಿನ ಒಲವು ತೋರಿಸಬೇಕು. ಅದರಲ್ಲೂ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೀರಭದ್ರಯ್ಯ ಸಿ. ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಚಿಕ್ಕಮಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಒಳಪಟ್ಟ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಮದುವೆ ಬಂಧನವನ್ನು ಮುರಿಯುವುದು ನ್ಯಾಯಾಲಯದ ಕೆಲಸವಲ್ಲ, ಅಂತಿಮ ಹಂತದವರೆಗೂ ಪತಿ, ಪತ್ನಿಯರಿಗೆ ಒಟ್ಟಾಗಿ ಜೀವಿಸಲು ತಿಳಿ ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ ಕಳೆದ ಲೋಕ ಅದಾಲತ್ನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇರೆಯಾಗಿದ್ದ ೦೯ ಜೋಡಿಗಳನ್ನು ಒಂದು ಮಾಡಲಾಗಿದೆ ಎಂದು ಹೇಳಿದರು.
ಲೋಕ ಅದಾಲತ್ನಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಹಣ ವಸೂಲಾತಿ, ಉದ್ಯೋಗ, ಮೋಟಾರು ಅವಘಡ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೆಮುಗಳು, ವಿದ್ಯುತ್ ಶುಲ್ಕ, ಗಣಿ ಮತ್ತು ಖನಿಜಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಿವಿಲ್ ಪ್ರಕರಣಗಳು (ಬಾಡಿಗೆ, ಅನುಭೋಗದ ಹಕ್ಕುಗಳು, ನಿರ್ಬಂಧಕಾಜ್ಞೆ ಮೊಕದ್ದಮೆಗಳು) ಸೇರಿದಂತೆ ಒಟ್ಟು ೫೫೪೫ ಪ್ರಕರಣಗಳನ್ನು ನವೆಂಬರ್ ೦೧ ರಂದು ರಾಜಿ ಸಂಧಾನಕ್ಕಾಗಿ ಗುರುತಿಸಲಾಗಿದ್ದು ೨೨೬೦ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಕ್ಷಿದಾರರು, ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್ನಲ್ಲಿ ಭಾಗವಹಿಸಬಹುದು. ಉಭಯ ಕಕ್ಷಿದಾರರಿಗೂ ಒಪ್ಪಿಗೆಯಾದರೆ ಅಂತಿಮ ತೀರ್ಮಾನವಾಗುತ್ತದೆ. ಈ ತೀರ್ಮಾನವು ನ್ಯಾಯಾಲಯದ ಡಿಕ್ರಿಯೆ ಮೌಲ್ಯ ಹೊಂದಿರುತ್ತದೆ. ತೀರ್ಮಾನ ಪ್ರಕಾರವಾಗಿ ಕಕ್ಷಿದಾರರು ನಡೆದುಕೊಳ್ಳಬೇಕು. ಉಭಯ ಕಕ್ಷಿದಾರರ ಭಾಂದವ್ಯ ವೃದ್ಧಿಯಾಗಿ ಪ್ರಕರಣ ಸುಖಾಂತ್ಯ ಕಾಣುತ್ತದೆ.
ಲೋಕ ಅದಾಲತ್ ತೀರ್ಮಾನ ಅಂತಿಮವಾಗಿದ್ದು, ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ವರ್ಷಗಟ್ಟಲೇ ನ್ಯಾಯಾಲಯಕ್ಕೆ ಅಲೆಯದೆ ಲೋಕ ಅದಾಲತ್ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದರು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ ಜಟsಚಿ.ಛಿhiಞಞಚಿmಚಿgಚಿಟuಡಿu@ಥಿಚಿhoo.ಛಿom <mಚಿiಟಣo:ಜಟsಚಿ.ಛಿhiಞಞಚಿmಚಿgಚಿಟuಡಿu@ಥಿಚಿhoo.ಛಿom> ಅಥವಾ ದೂ.ಸಂ. ೦೮೨೬೨-೨೯೫೩೨೧ನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ. ಹನುಮಂತಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಡಿ.ಬಿ. ಸುಜೇಂದ್ರ ಹಾಜರಿದ್ದರು.
Rashtriya Lok Adalat on December 14