ಚಿಕ್ಕಮಗಳೂರು: ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಮಹಿಳೆಯರು ಮತ್ತು ಯುವಕರು ಅತೀ ಹೆಚ್ಚು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಅವರು ಇಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ೨೦೨೪ ನ್ನು ಉದ್ಘಾಟಿಸಿ ಮಾತನಾಡಿದರು.
ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಗುರಿ ಹೊಂದಿದ್ದು, ಈ ಪರಿಕಲ್ಪನೆಯೊಂದಿಗೆ ಸಹಕಾರಿ ಸಂಸ್ಥೆಗಳು ಕೆಲಸ ಕಾರ್ಯ ನಿರ್ವಹಿಸುತ್ತ ಅಳಿಲು ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು. ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರ ಕೊಡುಗೆ ಅಪಾರವಾಗಿರಬೇಕು. ಇದರಲ್ಲಿ ಹೆಚ್ಚಿನ ಭಾಗ ಮಹಿಳೆಯರು ಮತ್ತು ಯುವಕರು ಪಾಲ್ಗೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದರು.
ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರು ಮತ್ತು ಯುವಕರು ಎಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೋ ಆಗ ಆ ಕ್ಷೇತ್ರಕ್ಕೆ ಅಭಿವೃದ್ಧಿಗೆ ವೇಗ ಸಿಗುತ್ತದೆ. ಜೊತೆಗೆ ಗುರಿ ತಲುಪಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಮಹಿಳೆ ಆಕರ್ಷಣೆಗೊಂಡು ಆ ದಿಕ್ಕಿನಲ್ಲಿ ಸಾಗಿದಾಗ ಅಭಿವೃದ್ಧಿ ಹೊಂದಲು ಸಾಧ್ಯ. ಇಂದು ಯುವಕರಿಗೆ ನಾನಾ ರೀತಿಯ ಯೋಚನೆಗಳಿವೆ, ಅದನ್ನು ಮನಗಂಡು ಯುವಕರನ್ನು ಆಕರ್ಷಿತಗೊಳಿಸಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿದರೆ ಬದುಕಿನ ದಾರಿ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.
ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ ನೆರವೇರಿಸಿ ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ಭಾರತ ಶೇ.೭೫ ರಷ್ಟು ಭಾಗ ಕೃಷಿ ಪ್ರಧಾನ ದೇಶವಾಗಿದ್ದು, ರೈತರಿಗೆ ಸಹಕಾರದ ಫಲ ಸಿಗಬೇಕೆಂಬ ದೃಷ್ಟಿಯಿಂದ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಸ್ಥಾಪಿಸಿ ಯಶಸ್ಸಿನೆಡೆಗೆ ಕೊಂಡೊಯ್ದ ರಾಮಣ್ಣಗೌಡ ಮತ್ತು ಮಾಜಿ ಶಾಸಕ ದಿವಂಗತ ಎಸ್.ಎಲ್. ಧರ್ಮೇಗೌಡ ಇವರನ್ನು ಸ್ಮರಿಸಿದರು.
ಕುಮಾರಿ ಗೀತಾ ನೇತೃತ್ವದಲ್ಲಿ ಮಹಿಳಾ ಸಹಕಾರಿ ಬ್ಯಾಂಕ್ ಯಶಸ್ವಿಯಾಗಿ ನಡೆಯುತ್ತಿದೆ. ಇಂದು ವಿವಿಧ ವರ್ಗಗಳಿಗೆ ಸಹಕಾರಿ ಸೌಲಭ್ಯಗಳನ್ನು ವಿಸ್ತರಿಸಲಾಗಿದ್ದು, ಸಹಕಾರಿ ಬ್ಯಾಂಕ್ಗಳಲ್ಲಿ ಷೇರುದಾರರಾದರೆ ಸುಲಭವಾಗಿ ಸಾಲ ಸೌಲಭ್ಯ ದೊರೆಯುತ್ತದೆ ಎಂದರು. ಸಾರ್ವತ್ರಿಕ ಚುನಾವಣೆಗಳ ಮಾದರಿಯಲ್ಲಿ ಸಹಕಾರಿ ಕ್ಷೇತ್ರದ ಚುನಾವಣೆ ನಡೆಯುತ್ತಿದೆ ಎಂದು ವಿಷಾಧಿಸಿದ ತಮ್ಮಯ್ಯ, ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಬೆರೆಸಬಾರದು, ಪ್ರಾಮಾಣಿಕ ಸಹಕಾರಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಮಾತ್ರ ಸಾಮಾನ್ಯ ಜನರಿಗೆ ನೆರವು ನೀಡಲು ಸಾಧ್ಯ ಎಂದು ಹೇಳಿದರು.
ಸಹಕಾರ ಸಂಘಗಳ ಅಪರ ನಿಬಂಧಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ನವೀನ್ ಮಾತನಾಡಿ, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬುದಕ್ಕೆ ಈ ರೀತಿ ಸಹಕಾರ ಸಂಸ್ಥೆಗಳು ಅಭಿವೃದ್ಧಿಯತ್ತ ಸಾಗಿ ಮಹತ್ತರವಾದ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಇದು ಒಂದು ದ್ಯೇಯ ಎಂದರು.
ಪತ್ತಿನ ಸಹಕಾರ ಸಂಘ, ಪಟ್ಟಣ ಸಹಕಾರ ಬ್ಯಾಂಕ್ ಸೇರಿದಂತೆ ಸಹಕಾರಿ ಬ್ಯಾಂಕ್ಗಳಲ್ಲಿ ಸಾಲಸೌಲಭ್ಯಗಳನ್ನು ಪಡೆದು ಗ್ರಾಮೀಣ ಜನರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು. ಈಗಾಗಲೇ ಒಟ್ಟು ೬೬ ಸಾವಿರ ಸಹಕಾರ ಸಂಸ್ಥೆಗಳಲ್ಲಿ ೨೬೧ ಕೋಟಿ ಜನ ಸಹಕಾರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ೪ ಲಕ್ಷ ಕೋಟಿ ಷೇರು ಬಂಡವಾಳ ಇದ್ದು, ಈ ಕುರಿತು ಜನರಲ್ಲಿ ವಿಶ್ವಾಸ ಮೂಡಿಸುವ ಅಗತ್ಯ ಇದೆ ಎಂದು ತಿಳಿಸಿದರು.
ಸಹಕಾರಿ ಸಂಸ್ಥೆಗಳ ಬಗ್ಗೆ ಜನರಿಗೆ ವಿಶ್ವಾಸವನ್ನು ಮನಮುಟ್ಟುವಂತೆ ಮಾಡಲು ರಾಷ್ಟ್ರಾದ್ಯಂತ, ರಾಜ್ಯಾದ್ಯಂತ ನ.೧೪ ರಿಂದ ೨೦ ರವರೆಗೆ ಸಹಕಾರಿ ಸಪ್ತಾಹ ಆಚರಣೆ ಮಾಡಲಾಗುತ್ತಿದೆ. ಅದೇ ರೀತಿ ಇಂದು ಇಲ್ಲಿ ಅರ್ಥಪೂರ್ಣ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ನಿರ್ದೇಶಕರುಗಳಾದ ಹೆಚ್.ಬಿ ಶಿವಣ್ಣ, ಎಸ್.ಎನ್ ರಾಮಸ್ವಾಮಿ, ಎಂ.ಎಸ್ ನಿರಂಜನ್, ಸಿ.ಎಸ್ ರಂಗನಾಥ್, ವರಸಿದ್ದಿ ವೇಣುಗೋಪಾಲ್, ಪರಮೇಶ್ವರಪ್ಪ, ಹೆಚ್.ಎಸ್ ಇನೇಶ್, ಸಿ.ಹೆಚ್ ವಿಶುಕುಮಾರ್, ಸಿ.ಆರ್ ಶಶಿಕುಮಾರ, ಎಸ್.ಟಿ ರಾಮಚಂದ್ರಪ್ಪ, ಎ.ಎನ್ ಮಹೇಶ್, ಹೆಚ್.ಬಿ ಸತೀಶ್, ಕೆ.ಟಿ ವೆಂಕಟೇಶ್ ಮತ್ತಿತರರು ಭಾಗವಹಿಸಿದರು. ಮೊದಲಿಗೆ ಸಹಕಾರ ಯೂನಿಯನ್ ಉಪಾಧ್ಯಕ್ಷ ದಿವಾಕರ್ ಸ್ವಾಗತಿಸಿ, ಸವಿತ ನಿರೂಪಿಸಿ, ಕೊನೆಯಲ್ಲಿ ಬಿ.ಸಿ ಲೋಕಪ್ಪಗೌಡ ವಂದಿಸಿದರು.
71st All India Cooperation Week 2024