ಚಿಕ್ಕಮಗಳೂರು: ಮಾನಸಿಕ ಹಾಗೂ ದೈಹಿಕ ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಮಹಿಳಾ ಕ್ರಿಕೇಟ್ ಆಟಗಾರರಾದ ವೇದಾಕೃಷ್ಣಮೂರ್ತಿ ಹೇಳಿದರು.
ನಗರದ ರಾಮನಹಳ್ಳಿಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಜಿಲ್ಲಾ ಪೊಲೀಸ್ ಇಲಾಖೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಅವರು ರೈಫಲ್ ತರಬೇತಿ ಸಂದರ್ಭದಲ್ಲಿ ಗುಂಡು ಹಾರಿಸುವಾಗ ಉಸಿರು ಮನಸ್ಸು ಮತ್ತು ತೂರು ಬೆರಳಿನ ಚಲನೆ ಒಂದಕ್ಕೊಂದು ಸಂಬಂಧ ಇರುತ್ತದೆ. ಮನಸುಮತ್ತು ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಗುರಿಯೂ ಸರಿಯಾಗಿರುತ್ತದೆ. ಹಾಗಾಗಿ ಪೋಲಿಸರು ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ದೇಶಕ್ಕಾಗಿ ಜೀವನವನ್ನು ಮುಡುಪಾಗಿಟ್ಟು ದೇಶವನ್ನು ಕಾಪಾಡುತ್ತಿರುವ ಸೈನಿಕರು, ಆಂತರಿಕ ರಕ್ಷಣೆ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ದೇಶದ ಹೆಸರನ್ನು ಉತ್ತುಂಗಕ್ಕೆ ತರುವ ಕ್ರೀಡಾಪಟುಗಳು ಸಹ ನಮ್ಮ ಮುಂದಿರುವ ಹೀರೊಗಳು ಎಂದು ಹೇಳಿದರು.
ಕ್ರಿಕೇಟ್ ಆಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಹೋಗಿ ಬಂದಿದ್ದೇನೆ. ಅಭಿವೃದ್ಧಿ ಹೊಂದಿರುವ ಹಾಗೂ ಶ್ರೀಮಂತ ದೇಶಗಳನ್ನು ನೋಡಿದ್ದೇನೆ. ಆದರೆ, ಚಿಕ್ಕಮಗಳೂರಿನಂತಹ ಜಿಲ್ಲೆ ಯಾವ ದೇಶದಲ್ಲೂ ನೋಡಿಲ್ಲ, ಉತ್ತಮ ಪರಿಸರ ಹೊಂದಿರುವ ವಿಶ್ವದ ಕೆಲವೇ ದೇಶಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಸ್ಥಾನ ಪಡೆದುಕೊಂಡಿರುವುದು ನಾವೆಲ್ಲಾ ಹೆಮ್ಮೆ ಪಡುವ ವಿಷಯ ಎಂದ ಅವರು, ಪ್ರೀತಿ, ಪ್ರೇಮ, ಉತ್ತಮ ಮನೋಭಾವನೆ ಹೊಂದಿರುವವರು ಈ ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಬೇರೆ ಎಲ್ಲೆಡೆಗೂ ಗಮನ ಹರಿಸದೇ ಮನಸ್ಸು ಮತ್ತು ದೇಹ ಒಂದೇ ವಿಷಯದ ಮೇಲೆ ಕೇಂದ್ರಿಕೃತವಾದರೆ ನಮ್ಮನ್ನು ತಡೆಯೋರು ಯಾರೂ ಇಲ್ಲ ಎಂದರು.
ಈ ಕ್ರೀಡಾಕೂಟದಲ್ಲಿ ಐದು ತಂಡಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದಾರೆ. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ಸಮನ್ವಯತೆ ಬರುತ್ತದೆ. ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರು ಮಾತನಾಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬರಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಬೇಧಬಾವ ಇರುವುದಿಲ್ಲ, ಈ ಅಂತರ ಕಡಿಮೆಯಾಗುತ್ತದೆ ಎಂದರು.
ಆರೋಗ್ಯ ಎಂದರೆ ಬರೀ ದೈಹಿಕ ಆರೋಗ್ಯ ಅಲ್ಲ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವೂ ಸಹ ಸಿಬ್ಬಂದಿಗಳಿಗೆ ಮುಖ್ಯವಾಗಿರುತ್ತದೆ. ಈ ಆರೋಗ್ಯಗಳು ಬರಬೇಕಾದರೆ ಕ್ರೀಡಾ ಮನೋಭಾವನೆ ನಮ್ಮಲ್ಲಿ ಸಕ್ರಿಯವಾಗಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.
Police department personnel should be involved in sports