ಚಿಕ್ಕಮಗಳೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೂರಾರು ಮಂದಿ ಮಾಲಾ ಧಾರಣೆ ಮಾಡುವ ಮೂಲಕ ವಿಶ್ವಹಿಂದೂ ಪರಿಷತ್-ಬಜರಂಗದಳದ ವತಿಯಿಂದ ನಡೆಯುವ ದತ್ತ ಜಂಯಂತಿ ಹಾಗೂ ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.
ಚಿಕ್ಕಮಗಳೂರು ನಗರದ ಆರ್ಜಿ ರಸ್ತೆ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್ನ ಪ್ರಾಂತ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ೧೦೭ ಮಂದಿ ಶುಕ್ರವಾರ ಬೆಳಗ್ಗೆ ದತ್ತ ಮಾಲೆ ಧರಿಸಿದರು.
ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಶ್ಯಾಂ ವಿ.ಗೌಡ, ವಿಭಾಗ ಸಂಯೋಜಕ್ ಶಶಾಂಕ್ ಹೆರೂರು, ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಜಿಲ್ಲಾ ಸಹ ಕಾರ್ಯದರ್ಶಿ ಅಮಿತ್ ಮತ್ತಿತರೆ ಪ್ರಮುಖರು ಮಾಲೆ ಧಾರಣೆ ಮಾಡಿದರು.
ಕಾಮಧೇನು ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ರಘು ಅವಧಾನಿ ಅವರು ಶಾಸ್ತ್ರೋಕ್ತವಾಗಿ ಎಲ್ಲರಿಗೂ ಮಾಲೆ ಧಾರಣೆ ಮಾಡಿಸಿದರು. ಇದೇ ವೇಳೆ ಗಣ ಹೋಮ, ದತ್ತ ಹೋಮ ಮತ್ತಿತರೆ ಪೂಜಾ ಕೈಂಕರ್ಯಗಳು ನಡೆದವು. ಮಾಲಾಧಾರಿಗಳು ದತ್ತಾತ್ರೇಯರ ಭಜನೆ, ಸಂಕೀರ್ತನೆಗಳನ್ನು ಹಾಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ದತ್ತಮಾಲಾ ಅಭಿಯಾನಕ್ಕೆ ಇಂದಿಗೆ ೨೫ ವರ್ಷ ಆಗುತ್ತಿದೆ. ಇದೊಂದು ಭಕ್ತಿಯ ಮತ್ತು ಮುಕ್ತಿಯ ಹೋರಾಟವಾಗಿ ಜನ ಮನವನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು.
ಇಂದಿನಿಂದ ದತ್ತಮಾಲಾ ಧಾರಣೆ ಆರಂಭವಾಗಿದೆ. ಡಿಸೆಂಬರ್ ೧೨ ರಂದು ಅನಸೂಯ ಜಯಂತಿ, ೧೩ ರಂದು ಶೋಭಾಯಾತ್ರೆ, ೧೪ ರಂದು ಪೀಠದಲ್ಲಿ ದತ್ತ ಜಯಂತಿ ನಡೆಯಲಿದೆ. ಯಾರ್ಯಾರಿಗೆ ಆಸ್ತೆ ಇದೆ, ನಾವು ಒಂದಾಗಿದ್ದರೆ ಮಾತ್ರ ಭವಿಷ್ಯ ಎನ್ನುವ ತತ್ವದ ಮೇಲೆ ನಂಬಿಕೆ ಇದೆ ಅವರೆಲ್ಲರೂ ಈ ಭಕ್ತಿಯ, ಶಕ್ತಿಯ ಹಾಗೂ ಮುಕ್ತಿಯ ಆಂಧೋಲನದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ವಿಶ್ವಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಮಾತನಾಡಿ, ದತ್ತಮಾಲೆ ಅಭಿಯಾನಕ್ಕೆ ೨೫ ನೇ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇಡೀ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮನೆ ಮಾಡಿದೆ. ಪ್ರತೀತಿಯ ಪ್ರಕಾರ ಯಾವ ಹೋರಾಟ, ವಿಚಾರ ಧಾರೆ ೨೫ ನೇ ವರ್ಷದ ರಜತ ಮಹೋತ್ಸವಕ್ಕೆ ಕಾಲಿಟ್ಟರೆ ಅದು ಮುಂದೆ ಗೆಲುವಿನ ಸಂಕೇತ ಎಂದು ಹೇಳಲಾಗುತ್ತದೆ. ಇಲ್ಲಿಂದ ದತ್ತಪೀಠದಲ್ಲಿ ಹಿಂದೂಗಳಿಗೆ ಗೆಲುವಿನ ಇತಿಹಾಸ ಆರಂಭವಾಗುತ್ತದೆ ಎಂದು ಹೇಳಿದರು.
Datta Jayanti-Dattamala campaign launched