ಚಿಕ್ಕಮಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗೆ ಮುಂದಾಗಿರುವ ಆಶ್ರಯ ಫೌಂಡೇಶನ್ನ ಧ್ಯೇಯೋದ್ದೇಶಗಳಿಗೆ ಸರ್ಕಾರದ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರವನ್ನು ನೀಡುತ್ತೇವೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಕೀರ್ತನಾ ಭರವಸೆ ನೀಡಿದರು.
ನಗರದ ಎಐಟಿ ವೃತ್ತದ ಒಕ್ಕಲಿಗರ ಭವನದಲ್ಲಿ ಎಲ್ಲಾ ವಯೋಮಾನದ ಜನರ ಆರೋಗ್ಯ, ಶಿಕ್ಷಣ, ಆರೋಗ್ಯ, ಸಮಾಜಸೇವೆ ಮುಂತಾದವುಗಳಿಗೆ ಅನುಕೂಲವಾಗುವಂತೆ ಆರಂಭಿಸಲಾಗಿರುವ ಆಶ್ರಯ ಫೌಂಡೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಖಾಸಗಿ ಸಂಘ, ಸಂಸ್ಥೆಗಳು ನಿರ್ಧಿಷ್ಠ ಕ್ಷೇತ್ರಗಳಿಗೆ ಸೀಮಿತವಾಗಿರುತ್ತವೆ. ಆದರೆ ಆಶ್ರಯ ಫೌಂಡೇಶನ್ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಲು ಮುಮದಾಗಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ಕೆ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡುತ್ತೇವೆ. ನಿಮ್ಮ ಸಹಕಾರ ನಮಗಿರಲಿ, ನಮ್ಮ ಸಹಕಾರ ನಿಮಗಿರುತ್ತದೆ ಎಂದರು.
ಆಶ್ರಯ ಫೌಂಡೇಶನ್ನ ಉಪಾಧ್ಯಕ್ಷೆ ವರ್ಷಾ ಎ.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಆಶ್ರಯ ಫೌಂಡೇಶನ್ನಿಂದ ಅರ್ಥಪೂರ್ಣವಾಗಿ ಚಿಕ್ಕಮಗಳೂರು ಜನತೆಗೆ ಸೇವೆ ಸಿಗಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಫೌಂಡೇಶನ್ ಅಂಗವಿಕಲರು, ಅಂಧರಷ್ಟೇ ಅಲ್ಲದೆ ವೃದ್ಧರು, ಅಬಲರಿಗೆ ನೆರವು ಕಲ್ಪಿಸುವುದು, ರಾಷ್ಟ್ರೀಯ ವಿಪತ್ತುಗಳು, ಸ್ತ್ರೀ ರೋಗಗಳಿಗೆ ಚಿಕಿತ್ಸೆ, ಅನಾಥ ಮಕ್ಕಳು, ಪ್ರಾಣಿಗಳಿಗೂ ಸಹ ಸಹಾಯ ಹಸ್ತ ನೀಡುವುದು ಉದ್ದೇಶವಾಗಿದೆ ಎಂದು ತಿಳಿಸಿದರು.
ಆಶ್ರಯ ಪುನರ್ ವಸತಿ ಕೇಂದ್ರ, ಆಶ್ರಯ ಮಕ್ಕಳ ರಕ್ಷಣಾ ಘಟಕ, ಆಶ್ರಯ ಮಾನಸಿಕ ಆರೋಗ್ಯ ಕೇಂದ್ರ, ಆಶ್ರಯ ಸ್ತ್ರೀ ಶಕ್ತಿ, ಆಶ್ರಯ ವಿಪತ್ತು ನಿರ್ವಹಣೆ, ಆಶ್ರಯ ವೃದ್ಧಾಶ್ರಮ, ಆಶ್ರಯ ರೋಗ ನಿರೋಧಕ ಕೇಂದ್ರ, ಆಶ್ರಯ ಆರೋಗ್ಯ, ಆಶ್ರಯ ಶಿಕ್ಷಣ ಹೀಗೆ ಪ್ಯಾನ್ ಇಂಡಿಯ ರೀತಿಯಲ್ಲಿ ಎಲ್ಲ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸರ್ಕಾರೇತರ ಸಂಸ್ಥೆ ಆಶ್ರಯ ಫೌಂಡೇಶನ್ನ ಧ್ಯೇಯ, ಉದ್ದೇಶಗಳು ಸಮಾಜಿಕವಾಗಿ, ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವವರಿಗೆ ಸಾರ್ವಜನಿಕವಾಗಿ ಸಹಾಯ ಮಾಡುವ ಸಲುವಾಗಿ ಹುಟ್ಟಿದೆ. ಇದು ಆರಂಭ ಶೂರತ್ವ ಆಗದೆ ಹತ್ತಾರು ವರ್ಷಗಳ ಕಾಲ ಬೆಳೆಯಲಿ.
ಇದರ ಬೆನ್ನೆಲುಬಾಗಿರುವ ಡಾ.ಜೆ.ಪಿ.ಕೃಷ್ಣೇಗೌಡ ಅವರು ಕಳೆದ ೩೨ ವರ್ಷಗಳಿಂದ ಆಶಾ ಕಿರಣ ಅಂಧಮಕ್ಕಳ ಪಾಠ ಶಾಲೆಯ ಅಧ್ಯಕ್ಷರಾಗಿ ರಾಜ್ಯದ ಅನೇಕ ಮಕ್ಕಳಿಗೆ ಆಶ್ರಯ ನೀಡಿರುವುದು ಸಾಕ್ಷಿ. ಈ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತದೆ ಎನ್ನುವ ಭರವಸೆ ಮೂಡಿದೆ. ಸರ್ಕಾರೇತರ ಸಂಸ್ಥೆ ಈ ರೀತಿಯ ಸೇವಾ ಕಾರ್ಯವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಡಾ.ಪ್ರಮೀಳಾ ದೇವಿ ಅವರು ಮಾಹಿತಿ ನೀಡಿದರು. ಫಲವತ್ತತೆ ಬಗ್ಗೆ ಡಾ.ವಿನುತ, ಸ್ತನ ಕ್ಯಾನ್ಸರ್ ಬಗ್ಗೆ ಡಾ.ಜ್ಯೋತಿ ಕೃಷ್ಣ, ಗರ್ಭ ನಿರೋಧಕ ಮತ್ತು ಸುರಕ್ಷಿತ ಗರ್ಭಪಾತದ ಬಗ್ಗೆ ಡಾ. ಪ್ರಶಸ್ತಿ, ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಡಾ.ಪವಿತ್ರ ಆರೋಗ್ಯ ಮಾಹಿತಿ ನೀಡಿದರು.
ಆಶ್ರಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಪಿ.ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಆಶಾಕಿರಣ ಅಂಧಮಕ್ಕಳು ಪ್ರಾರ್ಥಿಸಿದರು. ಆಶಾಕಿರಣ ಅಂಧಮಕ್ಕಳ ಶಾಲೆ ಅಧ್ಯಕ್ಷರಾದ ಡಾ.ಜೆ.ಪಿ.ಕೃಷ್ಣೇಗೌಡ ಡಾ. ದಿವ್ಯ, ಡಾ. ಅನಿತ, ಡಾ. ಗೌರಿ ವರುಣ್ ಉಪಸ್ಥಿತರಿದ್ದರು.
Ashraya Foundation inauguration program