ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಅಹಿಂದ ಸಮುದಾಯದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಡಿ.೧೦ ರಿಂದ ೧೬ ರವರೆಗೆ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-೨ ಹಮ್ಮಿಕೊಳ್ಳಲಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಂಗಡಿ ಚಂದ್ರು ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಅಹಿಂದ ಸರಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಹಿಂದ ಸಮುದಾಯದ ಜ್ವಲಂತ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ನೀಡುತ್ತಿಲ್ಲ. ನೆಪಮಾತ್ರಕ್ಕೆ ಮೌಖಿಕ ಹೇಳಿಕೆ ನೀಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಒಳಮೀಸಲು ಕೂಡಲೇ ಜಾರಿಮಾಡಬೇಕು, ಕಾಂತರಾಜ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಜಾರಿ ಮಾಡಬೇಕು. ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಬಾರದು ಎಂದು ಸದನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸಿಎಸ್ಟಿ ಟಿಎಸ್ಪಿ ಎಸ್ಸಿಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು, ಈ ಸಾಲಿನ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ೧೦ ಸಾವಿರ ಕೋಟಿ ರೂ. ಮೀಸಲಿಡಬೇಕು ಹಾಗೂ ಖಾಸಗಿ ವಲಯದಲ್ಲಿ ಮೀಸಲು ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಬೆಳಗಾವಿ ಚಲೋ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಎಸ್ಡಿಪಿಐ ಮುಖಂಡ ಗೌಸ್ಮುನೀರ್ ಮಾತನಾಡಿ, ಡಿ.೧೦ ರಂದು ಅಂಬೇಡ್ಕರ್ ಜಾಥಾ ಉಡುಪಿಯಿಂದ ಹೊರಡಲಿದ್ದು, ಡಿ.೧೨ ರಂದು ಜಿಲ್ಲೆಗೆ ಪ್ರವೇಶಿಸಲಿದೆ. ಮಧ್ಯಾಹ್ನ ೩.೩೦ ಕ್ಕೆ ನಗರದ ಆಜಾದ್ ಪಾರ್ಕಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಮುಂದೆ ವಿವಿಧ ಜಿಲ್ಲೆಯಲ್ಲಿ ಜಾಥಾ ಸಂಚರಿಸಿ ಡಿ.೧೬ ರಂದು ಬೆಳಗಾವಿ ತಲುಪಲಿದೆ ಎಂದು ಹೇಳಿದರು.
Chalo Belgaum Ambedkar Jatha-2 from Dec. 10 to 16