ಚಿಕ್ಕಮಗಳೂರು: ಸರ್ಕಾರಿ ನೌಕರರ ಸಂಘದ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರ ವಿರುದ್ಧ ಆರೋಪ ಮಾಡಿದ್ದ ಹಾಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧು ಬಿ. ರೂಪೇಶ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಚುನಾವಣೆ ಸಂದರ್ಭದಲ್ಲಿ ದೇವೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಅವರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರು ಸರ್ಕಾರಕ್ಕೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ದೇವೇಂದ್ರ ಅವರನ್ನು ಅಮಾನತ್ತು ಮಾಡಲಾಗಿದೆ.
ಅಮಾನತು ಆದೇಶ ಪತ್ರದಲ್ಲಿ ಬೋಜೇಗೌಡ ಅವರ ವಿರುದ್ಧ ದೇವೇಂದ್ರ ಅವರು ಮಾಡಿರುವ ಎಲ್ಲ ಆರೋಪಗಳನ್ನೂ ಪ್ರಸ್ತಾಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯರು ಸರ್ಕಾರಿ ನೌಕರರಿಗೆ ಬೆದರಿಕೆ ಒಡ್ಡಿದ್ದಾರೆ. ಇದಲ್ಲದೆ ಚುನಾವಣೆಯಲ್ಲಿ ಹಣ ಹಾಗೂ ಬೆಳ್ಳಿಯ ಬಟ್ಟಲುಗಳನ್ನು ಮತದಾರರಿಗೆ ಆಮಿಷ ರೂಪದಲ್ಲಿ ನೀಡಿದ್ದಾರೆ ಎಂದು ದೇವೇಂದ್ರ ಆರೋಪ ಮಾಡಿದ್ದರು ಎಂಬುದನ್ನು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.
ಸರ್ಕಾರಕ್ಕೆ ಪತ್ರ ಬರೆದಿದ್ದ ಎಸ್ ಎಲ್ ಭೋಜೇಗೌಡ ಅವರು ತಾವು ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು, ಯಾರಿಗೂ ಬೆದರಿಕೆ ಒಡ್ಡುವುದಾಗಲಿ ಅಥವಾ ಆಮಿಷ ಒಡ್ಡುವುದಾಗಲಿ ಮಾಡಿಲ್ಲ. ಆದರೂ ಮಾಧ್ಯಮಗಳಲ್ಲಿ ನಮ್ಮ ವಿರುದ್ಧ ಆರೋಪ ಮಾಡುವ ಮೂಲಕ ಸಾರ್ವಜನಿಕ ಜೀವನಕ್ಕೆ ಧಕ್ಕೆ ಹಾಗೂ ಕಳಂಕ ತರಲಾಗಿದೆ. ಜನಪ್ರತಿನಿಧಿಗಳ ತೇಜೋವದೆ ಉಂಟು ಮಾಡಿರುವ ದೇವೇಂದ್ರ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮಗಳಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭೋಜೇಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಈ ಪತ್ರವನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ, ಸಿಂಧೂ ಬಿ ರೂಪೇಶ್ ಅವರು ಕರ್ನಾಟಕ ನಾಗರೀಕ ಸೇವಾ ನಿಯಮಗಳು 2011ರ ನಿಯಮ ಐದು ಮತ್ತು 10 ಹಾಗೂ 11ಕ್ಕೆ ದೇವೇಂದ್ರ ಅವರು ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರು ಆಗಿರುವ ದೇವೇಂದ್ರ ಪ್ರಸ್ತುತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾರೆ. ಇದೀಗ ಸೇವೆಯಿಂದ ಅಮಾನತು ಗೊಂಡಿರುವ ದೇವೇಂದ್ರ ಅವರ ಹುದ್ದೆಯ ಹಕ್ಕನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 20(ಎಫ್)ರಂತೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಗೆ ಆದೇಶಿಸಲಾಗಿದೆ.
Government Employees Association District President Devendra suspended