ಚಿಕ್ಕಮಗಳೂರು: ದತ್ತ ಜಯಂತಿ ಉತ್ಸವದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ವಿಶ್ವಹಿಂದೂ ಪರಿಷತ್-ಬಜರಂಗದಳದ ಮುಖಂಡರು ಶುಕ್ರವಾರ ನಗರದಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸಿದರು.
ಸಿ.ಟಿ.ರವಿ ಅವರೊಂದಿಗೆ ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ರಘು ಸಕಲೇಶಪುರ ಮತ್ತಿತರರರು ಸಿ.ಟಿ.ರವಿ ಅವರ ನಿವಾಸದಿಂದ ಭಿಕ್ಷಾಟನೆಗೆ ತೆರಳಿದರು. ಈ ವೇಳೆ ರವಿ ಅವರ ಪತ್ನಿ ಪಲ್ಲವಿ ಸಿ.ಟಿ.ರವಿ ಅವರು ಎಲ್ಲಾ ಮಾಲಾಧಾರಿಗಳಿಗೆ ಪಡಿ ನೀಡಿ ಬೀಳ್ಕೊಟ್ಟರು.
ನಂತರ ದತ್ತಾತ್ರೇಯರ ಭಜನೆ ಮಾಡುತ್ತಾ ನರಾಯಣಪುರ ಬಡಾವಣೆಯ ವಿವಿಧ ಮನೆಗಳಿಗೆ ತೆರಳಿದ ಮಾಲಾಧಾರಿಗಳು ಪರಿ ಸಂಗ್ರಹಿಸಿದರು. ಈ ವೇಳೆ ನಿವಾಸಿಗಳು ಅಕ್ಕಿ, ಬೆಲ್ಲ, ಬೇಳೆ ಇನ್ನಿತರೆ ಪದಾರ್ಥಗಳನ್ನು ಪಡಿ ರೂಪದಲ್ಲಿ ಅರ್ಪಿಸಿದರು. ಕೆಲವರು ಮಾಲಾಧಾರಿಗಳ ಪಾದಗಳನ್ನು ತೊಳೆದು ಆಶೀರ್ವಾದ ಪಡೆದರು.
ಇಂದು ಸಂಗ್ರಹಿಸಲಾಗಿರುವ ಪಡಿಯನ್ನು ಶನಿವಾರ ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿ ಅಲ್ಲಿ ನಡೆಯುವ ದತ್ತ ಜಯಂತಿ ಉತ್ಸವದಲ್ಲಿ ಸಮರ್ಪಿಸಲಾಗುವುದು.
ಸಿ.ಟಿ.ರವಿ ಅವರ ಜೊತೆಗೆ ವಿಶ್ವಹಿಂದೂ ಪರಿಷತ್ ಹಾಸನ ವಿಭಾಗ ಕಾರ್ಯದರ್ಶಿ ಶಶಾಂಕ್ ಹೆರೂರು, ಬಜರಂಗದಳದ ಶ್ಯಾಂ ವಿ.ಗೌಡ, ನಗರಸಭೆ ಸದಸ್ಯ ರಾಜು, ಮುಖಂಡರುಗಳಾದ ಅನಿಲ್ ಕುಮಾರ್, ಸೀತಾರಾಮ ಭರಣ್ಯ, ಹಿರೇಮಗಳೂರು ಕೇಶವ, ಪುನೀತ್ ಸೇರಿದಂತೆ ಇತರರು ಪಡಿ ಸಂಗ್ರಹಿಸಿದರು.
Padi collection going door to door in the city during Datta Jayanti festival