ಶೃಂಗೇರಿ: ನಾಡಿನೊಳಗೆ ಇರುವ ನಮಗೆ ಸರಕಾರ ಸವಲತ್ತು ನೀಡಿದಂತೆ ಗುಡ್ಡಗಡು ಪ್ರದೇಶದಲ್ಲಿರುವ ಗಿರಿಜನರಿಗೂ ಅಗತ್ಯ ಮೂಲಭೂತ ಸೌಕರ್ಯ ನೀಡಿ, ಅವರ ಸಂಕಷ್ಟ ಪರಿಹರಿಸಬೇಕು ಎಂದು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕೆರೆ ಗ್ರಾಮ ಪಂಚಾಯಿತಿಯ ಬಾಳಗೆರೆ ಗ್ರಾಮದ ಮುಂಡಗಾರಿನಲ್ಲಿ ಏರ್ಪಡಿಸಿದ್ದ ಗಿರಿ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಹೇಗಿದೆಯೋ, ಅದೇ ರೀತಿ ಗುಡ್ಡಗಾಡಿನಲ್ಲಿ ತಲಾತಲಾಂತರದಿಂದ ಬದುಕು ನಡೆಸುತ್ತಿರುವ ಗಿರಿಜನರಿಗೂ ಬದುಕುವ ಹಕ್ಕು ಹಾಗೂ ಮೂಲಭೂತ ಸೌಲಭ್ಯ ಪಡೆಯಬೇಕಿದೆ ಎಂದರು.
ಎಲ್ಲರೂ ಬಯಸುವುದು ನೆಮ್ಮದಿಯನ್ನು. ನೆಮ್ಮದಿ ದೊರಕಲು ನಾವು ಸದಾ ಭಗವಂತನ ಸ್ಮರಣೆ ಮಾಡಬೇಕು.ಭಗವಂತನ ಅನುಗ್ರಹವಿದ್ದಲ್ಲಿ ಸುಖ, ಸಂತೋಷ ದೊರಕುತ್ತದೆ.ಜಗತ್ತಿಗೆ ಮಾರ್ಗದರ್ಶನ ನೀಡಿದ ಶ್ರೀಕೃಷ್ಣನ ಅನುಗ್ರಹ ಮತ್ತು ನಮ್ಮ ಪ್ರಯತ್ನವಿದ್ದಲ್ಲಿ ಯಾವುದೇ ಕೆಲಸವನ್ನು ನಿರ್ವಿಘ್ನವಾಗಿ ಮಾಡಬಹುದಾಗಿದೆ.ನಮ್ಮ ಧರ್ಮವನ್ನು ನಾವು ಪಾಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಇವರಿಗೆ ರಸ್ತೆ, ಆಸ್ಪತ್ರೆ, ಶಾಲೆ ಯಾವುದೂ ಇಲ್ಲವಾಗಿದೆ.ಧರ್ಮವನ್ನು ನಂಬಬೇಕು.ಧರ್ಮಾಚರಣೆಯನ್ನು ನಾವು ಮಾಡಲೇಬೇಕು. ಗಿರಿಜನರು ತಲಾತಾಲಂತರದಿಂದ ಸನಾತನ ಧರ್ಮದ ವಾರಸುದಾರರಾಗಿದ್ದಾರೆ ಎಂದರು.
ಗಿರಿಜನ ಮುಖಂಡ ಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿಗಾಗಿ ನಾವು ಜಮೀನು ಮಾಡಿಕೊಂಡಿದ್ದು, ಅರಣ್ಯ ಇಲಾಖೆ ಕೇವಲ ಒಂದು ಎಕರೆ ಒತ್ತುವರಿ ಮಾಡಿದವರ ವಯೋವೃದ್ಧರಿಗೂ ಭೂಕಬಳಿಕೆ ಕೇಸು ದಾಖಲಿಸಿದೆ. ನಾಡಿನ ಜನರಿಂದ ದೂರವಿರುವ ನಮಗೆ ಸರಕಾರ ಹೆಚ್ಚಿನ ಸೌಲಭ್ಯ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗಣಪಾತ್ರಿಯಾದ ತಮ್ಮೇಗೌಡ ಮತ್ತು ಗಿಡ್ಡಮ್ಮರವರನ್ನು ಶ್ರೀಗಳು ಗೌರವಿಸಿದರು. ಶ್ರೀಗಳು ಗ್ರಾಮಕ್ಕೆ ಆಗಮಿಸಿದಾಗ ಪೂರ್ಣಕುಂಭ ಸ್ವಾಗತ ನೀಡಲಾಯಿತು.ಶ್ರೀಗಳ ಆಗಮನ ಹಿನ್ನಲೆಯಲ್ಲಿ ತಳಿರು ತೋರಣ, ಬಾಳೆಕಂಬ, ರಂಗೋಲಿ ಹಾಕಿ ಶೃಂಗರಿಸಲಾಗಿತ್ತು.
ಕಾರ್ಯಕ್ರಮದ ನಂತರ ಗಿರಿಜನ ಅಭಿವೃದ್ಧಿ ಜಿಲ್ಲಾ ಅಧಿಕಾರಿ ಭಾಗಿರಥಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಸಂವಾದ ನಡೆಸಿದರು. ಶ್ರೀ ಶಾರದಾ ಪೀಠದಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಶಿವರಾಜ್, ಗುರುಪ್ರಸಾದ್,ಚೇತನ್ ಇತರರು ಇದ್ದರು.
Provide necessary infrastructure to tribals too