ಚಿಕ್ಕಮಗಳೂರು: ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನೂರಾರು ಬಿಜೆಪಿ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಗುರುವಾರ ರಾತ್ರಿ ಟೈರ್ ಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ನಡೆಸಿದರು.
ಬಸವನಹಳ್ಳಿಯ ಸಿಟಿ ರವಿ ಅವರ ನಿವಾಸದಿಂದ ಪ್ರತಿಭಟನ ಮೆರವಣಿಗೆ ಮೂಲಕ ಹನುಮಂತಪ್ಪ ವೃತ್ತಕ್ಕೆ ಆಗಮಿಸಿದ 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಾಣ ಮಾಡಿ ರಸ್ತೆ ತಡೆ ನಡೆಸಿದರು. ಬಳಿಕ ಟೈರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದು ಗಂಟೆಗಳ ಕಾಲ ಕಡೂರು ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಸಿ.ಟಿ.ರವಿ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ ಸುಳ್ಳು ದೂರನ್ನು ಆಧರಿಸಿ ಸಿ.ಟಿ.ರವಿ ಅವರನ್ನು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಹನುಮಂತಪ್ಪ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚುತ್ತಿದ್ದಂತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ವೇಳೆ ಪೊಲೀಸರು ಫೈರ್ ಇಂಜಿನ್ ಮೂಲಕ ಬೆಂಕಿ ನಂದಿಸಿದ್ದಲ್ಲದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನ ನಿರತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯಲು ಮುಂದಾದಾಗ ಬಿಜೆಪಿ ಮಹಿಳಾ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಕುಳಿತು ಪ್ರತಿಭಟನೆ ಆರಂಭಿಸಿದರು.
ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಬಾರದು. ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮಹಿಳಾ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದರು.
ಮಾಜಿ ಸಚಿವ ಸಿಟಿ ರವಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಹಾಗೂ ಕೂಡಲೇ ಸಿಟಿ ರವಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲಾ ಬಂದ್ ಗೆ ಕರೆ ನೀಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ತಿಳಿಸಿದರು.
ರಾಜ್ಯ ಸರ್ಕಾರ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದೇ ಕಾರಣದಿಂದಾಗಿಯೇ ಸಿ.ಟಿ. ರವಿ ಅವರನ್ನು ಬಂಧಿಸಲಾಗಿದೆ. ಕೂಡಲೇ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಚಿಕ್ಕಮಗಳೂರು ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬಿಜೆಪಿ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಪ್ರಮುಖರಾದ ಕೋಟೆ ರಂಗನಾಥ್, ಪುಷ್ಪರಾಜ್, ಮಧುಕುಮಾರ್ ರಾಜ್ ಅರಸ್, ಜಸಂತ ಅನಿಲ್ ಕುಮಾರ್, ಕವಿತಾ ಶೇಖರ್, ಅಂಕಿತ ಮತ್ತಿತರರಿದ್ದರು.
BJP protests demanding the release of CT Ravi