ಚಿಕ್ಕಮಗಳೂರು: ಬೆಳೆಗಾರರ ಪಾಲಿಗೆ ಉರುಳಾಗಿದ್ದ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಎನ್ನುವ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿರುವುದರ ಪರಿಣಾಮ ಸುಸ್ಥಿದಾರ ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯ್ದೆ ತಪ್ಪಿಸಲು ಕೆನರಾ ಬ್ಯಾಂಕ್ ಒನ್ ಟೈಂ ಸೆಟಲ್ಮೆಂಟ್ ಅವಕಾಶವನ್ನು ಕಲ್ಪಿಸಲು ಒಪ್ಪಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮರುಪಾವತಿಸದೆ ಸುಸ್ಥಿದಾರ ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜಮೀನು ಹರಾಜು ಹಾಕುವ ಮೂಲಕ ಜೀವನವೇ ಅಸ್ಥಿರವಾಗುವ ಒತ್ತಡದಲ್ಲಿದ್ದವರಿಗೆ ಈಗ ಕೇಂದ್ರ ಸರ್ಕಾರ ದೊಡ್ಡದೊಂದು ರಿಲೀಫ್ ನೀಡಿದೆ ಎಂದು ತಿಳಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿಗೆ ಸಂಸದರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಡಾ.ಮಂಜುನಾಥ್ ಇತರರ ನೇತೃತ್ವದಲ್ಲಿ ತಾವು ನಿಯೋಗ ತೆರಳಿ ಸರ್ಫೇಸಿ ಕಾಯ್ದೆಯಡಿ ತೋಟ ಹರಾಜು ಹಾಕದಂತೆ ಬ್ಯಾಂಕ್ಗಳಿಗೆ ನಿರ್ದೇಶನ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ತಮ್ಮ ಸಚಿವಾಲಯದ ಕಾರ್ಯದರ್ಶಿಗಳ ಮೂಲಕ ಕೆನರಾ ಬ್ಯಾಂಕ್ ಎಂಡಿ ನಾಗರಾಜ್ ಅವರೊಂದಿಗೆ ಮಾತನಾಡಿಸಿದ ಪರಿಣಾಮವಾಗಿ ಬ್ಯಾಂಕ್ನ ಎಂಡಿ ಅವರು ತಮ್ಮೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾತುಕತೆ ವೇಳೆ ಕೆನರಾ ಬ್ಯಾಂಕ್ ಎಂಡಿ ಸತ್ಯನಾರಾಯಣ ರಾಜು ಅವರು ಸೂಕ್ತ ರೀತಿಯಲ್ಲಿ ಫಾರ್ಮುಲ ತಯಾರಿಸಿ ಕಾಫಿ ಬೆಳೆಗಾರರ ಸಾಲವನ್ನು ಒನ್ ಟೈಮ್ ಸೆಟಲ್ಮೆಂಟ್ಗೆ ಒಪ್ಪಿಗೆ ಸೂಚಿಸಿದ್ದಲ್ಲದೆ ಕೂಡಲೇ ಸಾಲದ ಶೇಕಡ ೫ ರಷ್ಟನ್ನು ಪಾವತಿಸಿ ಉಳಿದ ಮೊತ್ತವನ್ನು ೬ ತಿಂಗಳ ಕಾಲಾವಕಾಶದಲ್ಲಿ ಪಾವತಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಎನ್ಪಿ ಆದವರಿಗೆ ಸರಳ ಬಡ್ಡಿ ದರದಲ್ಲಿ ಸಾಲದ ಮೊತ್ತವನ್ನು ನಿಗದಿಪಡಿಸುವ ಮತ್ತು ಮುಂದಿನ ದಿನಗಳಲ್ಲಿ ಎನ್ಪಿ ಆದವರಿಗೂ ಸಾಲ ನೀಡುವ ಸೂತ್ರದ ಅಳವಡಿಕೆಗೆ ಒಪ್ಪಿಕೊಳ್ಳಲಾಗಿದ್ದು, ಎಲ್ಲಾ ಬೆಳೆಗಾರರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಲುವಾಗಿ ಡಿಸೆಂಬರ್ ೨೬ ಮತ್ತು ೨೭ರಂದು ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಕೆನರಾ ಬ್ಯಾಂಕ್ನ ರೀಜನಲ್ ಆಫೀಸಿನಲ್ಲಿ ಕೆನರಾ ಅದಾಲತ್ ಏರ್ಪಡಿಸಲಿದ್ದು, ಅಂದು ಎಲ್ಲಾ ಕಾಫಿ ಬೆಳೆಗಾರರು ಭಾಗವಹಿಸಿ ಇರುವ ಸಾಲದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಅವರು ಕೋರಿದರು.
ಬಹು ವರ್ಷಗಳಿಂದ ಕಾಫಿ ಬೆಳೆಗಾರರನ್ನು ಕಾಡುತ್ತಿದ್ದ ಸರ್ಫೇಸಿ ಸಮಸ್ಯೆಗೆ ಪರಿಹಾರ ಹುಡುಕುವ ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಕಳೆದ ಒಂದು ವರ್ಷದ ಹಿಂದೆಯೇ ಮನವಿ ನೀಡಿ ಚರ್ಚಿಸಲಾಗಿತ್ತು. ಇದೇ ಡಿಸೆಂಬರ್ ೧೭ ರಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಡಾ. ಮಂಜುನಾಥ್, ಕೋಲಾರ ಸಂಸದರಾದ ಜೆಡಿಎಸ್ನ ಮಲ್ಲೇಶ್ ಬಾಬು ಮತ್ತಿತರರ ನೇತೃತ್ವದಲ್ಲಿ ಕಾಫಿ ಮಂಡಳಿ ನಿಯೋಗ ಭೇಟಿ ಮಾಡಿ, ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್ ಅವರನ್ನು ಭೇಟಿಯಾಗಿ ಸರ್ಫೇಸಿ ಕಾಯ್ದೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮನವಿ ಮಾಡಲಾಯಿತು.
ಇದಕ್ಕೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಲು ಸೂಚಿಸುವ ಮೂಲಕ ಸಚಿವರು ಬೇಡಿಕೆಗೆ ಗೌರವ ನೀಡಿದ್ದರು ಎಂದು ತಿಳಿಸಿದರು. ಕಾಫಿ ಮಂಡಳಿ ನಿರ್ದೇಶಕರುಗಳಾದ ಡಾ.ಮಹಾಬಲ, ಕೃಷ್ಣಾನಂದ, ಜಿ.ಕೆ.ಕುಮಾರ್, ಪ್ರದೀಪ್ ಪೈ ಮತ್ತು ಡಿ.ಎಂ.ಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.
Canara Bank offers one-time settlement to avoid SARFAESI Act