ಚಿಕ್ಕಮಗಳೂರು: ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹಾಗೂ ಕಲೆ, ಸಾಹಿತ್ಯ ಅನಾವರಣಗೊಳಿಸುವುದೇ ಶಾಲಾ-ಕಾಲೇಜು ವಾರ್ಷಿಕೋತ್ಸವದ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಂದು ಕುವೆಂಪುಕಲಾ ಮಂದಿರದಲ್ಲಿ ನಗರದ ಬಾಲಿಕಾ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ೨೦೨೪-೨೫ನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಜೀವನದ ಪ್ರಮುಖ ಅಂಶವಾಗಿದ್ದು, ಇದನ್ನು ಮರೆಯಬಾರದು. ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಪಿಯುಸಿ ಸಹಕಾರಿಯಾಗಿದೆ ಎಂದರು.
ಶಿಕ್ಷಣ ಅಮೂಲ್ಯವಾದುದ್ದು. ಇದೊಂದು ಬೆಳೆಯುವ ಅಪೂರ್ವ ಸಾಧನವಾಗಿದೆ. ಶಿಕ್ಷಣ ಪ್ರಪಂಚದ ಅತ್ಯಾಧುನಿಕ ಆಯುಧವಾಗಿದ್ದು ಪ್ರಪಂಚದ ದಿಕ್ಕನ್ನು ಬದಲಾಯಿಸಲು ವಿದ್ಯೆಯನ್ನು ಬಳಸಬಹುದಾಗಿದೆ ಎಂದು ಹೇಳಿ ಶ್ರೀಮಂತನನ್ನು ಅವನ ಊರಿನಲ್ಲಿ ರಾಜನಿಗೆ ಒಂದು ದೇಶದಲ್ಲಿ ಮಾತ್ರ ಗೌರವಿಸುತ್ತಾರೆ ಆದರೆ, ವಿದ್ಯೆ ಕಲಿತು ಒಳ್ಳೆಯ ವಿದ್ವಾಂಸನಾದರೆ ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಗೌರವ ಲಭಿಸುತ್ತದೆ ಎಂದು ಸಂಸ್ಕೃತದ ಶ್ಲೋಕದ ಕುರಿತು ವಿಶ್ಲೇಷಿಸಿದರು.
ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ವ್ಯಸನಮುಕ್ತ ಸಂಸ್ಕಾರ, ಸಂಸ್ಕೃತಿ ಕಲಿಸುವ ಕೆಲಸವನ್ನು ಉಪನ್ಯಾಸಕರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಾಮರಸ್ಯ, ಸಮಾನತೆಯಿಂದ ಕೂಡಿ ವಾರ್ಷಿಕೋತ್ಸವ ಆಚರಣೆ ಮಾಡುವುದರಿಂದ ತಮ್ಮ ಮಕ್ಕಳನ್ನು ಈ ಕಾಲೇಜಿಗೆ ಸೇರಿಸಲು ಪೋಷಕರನ್ನು ಪ್ರರೇಪಿಸಲು ಸಹಕಾರವಾಗುತ್ತದೆ ಎಂದರು.
ಸರ್ಕಾರಿ ಉಪನ್ಯಾಸಕರಿಗೆ ನೀಡುವ ಸೌಲಭ್ಯ, ವೇತನವನ್ನು ಅತಿಥಿ ಉಪನ್ಯಾಸಕರಿಗೂ ನೀಡಬೇಕೆಂದು ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಖೋಖೋ ಪಂದ್ಯಾವಳಿಗೆ ಅನುಕೂಲವಾಗುವಂತೆ ಸುಮಾರು ೫ ಲಕ್ಷ ರೂ ವೆಚ್ಚದ ಕ್ರೀಡಾ ಮ್ಯಾಟ್ ನೀಡುವುದಾಗಿ ಭರವಸೆ ನೀಡಿದರು.
ಉಪನ್ಯಾಸ ನೀಡಿದ ಬೆಂಗಳೂರು ಮಹಾರಾಣಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಪ್ರಧ್ಯಾಪಕರಾದ ಡಾ. ಎಲ್.ಜಿ ಮೀರಾ ಮಾತನಾಡಿ, ಯಾರೂ ಕದಿಯಲಾಗದ ದೊಡ್ಡ ಸಂಪತ್ತು ವಿದ್ಯೆ, ಆದರೆ ವಿದ್ಯಾವಂತರು ರಾಷ್ಟ್ರಕವಿ ಕುವೆಂಪು ಅವರಂತೆ ಆಗಬೇಕು. ಪ್ರತೀ ಮಗು ಹುಟ್ಟುತ್ತ ವಿಶ್ವ ಮಾನವ, ಸಮಾಜ ಅವನನ್ನು ಜಾತಿ, ಮತ, ಧರ್ಮ, ಲಿಂಗ ಬೇರೆ ಬೇರೆ ಬೇಧ ಕಲ್ಪಿಸಿ ಅಲ್ಪ ಮಾನವನನ್ನಾಗಿ ಮಾಡುತ್ತಿದ್ದಾರೆ ಎಂದು ವಿಷಾಧಿಸಿದರು.
ಇದರಿಂದ ಹೊರಬಂದು ಮತ್ತೆ ಅವನನ್ನು ವಿಶ್ವ ಮಾನವನನ್ನಾಗಿ ಮಾಡುವುದು ವಿದ್ಯೆ ಆಗಿದ್ದು, ಶಿಕ್ಷಣವನ್ನು ಪ್ರತಿಯೊಬ್ಬರೂ ಕಲಿಯಲು ಹಾತೊರೆಯಬೇಕು ಅದೇ ಅಂತಿಮ, ಅತ್ಯುತ್ತಮ ಸಾಧನ ಎಂದು ಹೇಳಿ ಪ್ರಸ್ತುತ ಪ್ರಪಂಚ ಸಮಾನತೆಯ ಕನಸು ಕಾಣುತ್ತಿದೆ, ಇಂದು ಅಸಮಾನತೆಯಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಬದುಕು, ಧರ್ಮ, ಜಾತಿ, ಜನಾಂಗ, ಲಿಂಗಗಳಿಂದ ಚೂರು ಚೂರಾಗಿ ಮಾನವರಲ್ಲಿ ಮೇಲು-ಕೀಳೆಂಬ ಭಾವನೆಯಲ್ಲಿ ನರಳುತ್ತಿದ್ದಾರೆಂದು ತಿಳಿಸಿದರು.
ಹೆಣ್ಣು ಹುಟ್ಟಿದ ಮನೆಯಲ್ಲೇ ಲಿಂಗ ತಾರತಮ್ಯದ ವಿಷಕಾರಿ ವಿಷಯವನ್ನು ಅರ್ಥಮಾಡಿಕೊಂಡು ಅದರಿಂದ ಮುಕ್ತಿ ಪಡೆಯುವ ಜೊತೆಗೆ ಸುತ್ತಮುತ್ತಲಿನವರನ್ನು ಮುಕ್ತಿಗೊಳಿಸುವ ಬಹುದೊಡ್ಡ ಜವಾಬ್ದಾರಿ ವಿದ್ಯಾರ್ಥಿನಿಯರ ಮೇಲಿದೆ ಎಂದು ಹೇಳಿದರು. ಸತಿಪದ್ದತಿ, ವಿಧವೆಯರ ಕೇಶ ಮುಂಡನ ಇವು ಲಿಂಗಬೇಧದ ಸಾಕ್ಷಿಗಳಾಗಿವೆ. ಈ ಬಗ್ಗೆ ನಮ್ಮ ಪೂರ್ವಿಕರು ಎಷ್ಟೆಲ್ಲಾ ಹಿಂಸೆಯನ್ನು ಅನುಭವಿಸಿ ಈ ಪಿಡುಗುಗಳ ವಿರುದ್ಧ ಸಮಾನತೆಗಾಗಿ ಕಳೆದ ೨೦೦ ವರ್ಷಗಳಿಂದ ಸತತ ಹೋರಾಟಗಳು ನಡೆಯುತ್ತಿವೆ ಎಂದರು.
ಅಕ್ಕಮಹಾದೇವಿ ಸ್ತ್ರೀ ಸಮಾನತೆಗಾಗಿ ಹೋರಾಡಿದ ಧೀರ ದಿಟ್ಟ ಮಹಿಳೆಯಾಗಿದ್ದಾರೆ. ಹೆಣ್ಣುಮಕ್ಕಳನ್ನು ಸಂಕೋಲೆಗಳಿಂದ ಬಿಡುಗಡೆ ಮಾಡಲು ಶಿಕ್ಷಣ ಒಂದೇ ಪ್ರಬಲ ಸಾಧನವಾಗಿದ್ದು, ಹೋರಾಟ ನಡೆಸಿದ ಪ್ರತಿಫಲವಾಗಿ ಹೆಣ್ಣು ಸಮಾನತೆ ಕಾಣುತ್ತಿದ್ದಾಳೆ ಎಂದು ತಿಳಿಸಿದರು.
ಬಹುಮಾನ ವಿತರಣೆ ಮಾಡಿದ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಬಸವನಹಳ್ಳಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ಒಂದಲ್ಲಾ ಒಂದು ಸರ್ಕಾರಿ ಹುದ್ದೆ ಲಭಿಸುತ್ತದೆ ಎಂಬುದಕ್ಕೆ ಕಳೆದ ೨೪ ವರ್ಷಗಳಿಂದ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರು ಇಂದು ಉನ್ನತ ಸರ್ಕಾರಿ ಹುದ್ದೆಯಲ್ಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಪುಟ್ಟನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುಭಾನ್ ಭಾಗವಹಿಸಿದ್ದರು. ಮೊದಲಿಗೆ ಪ್ರಾಚಾರ್ಯ ಸತೀಶ್ ಶಾಸ್ತ್ರಿ ಸ್ವಾಗತಿಸಿ, ಉಪನ್ಯಾಸಕ ಪುರುಷೋತ್ತಮ್ ನಿರೂಪಿಸಿದರು.
Balika Government Undergraduate College Anniversary Ceremony