ಚಿಕ್ಕಮಗಳೂರು: ಮೂಲಭೂತ ಹಕ್ಕು ಧಮನಗೊಳಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿ ಶಾರೀರಿಕ ಮತ್ತು ಮಾನಸಿಕ ದೌರ್ಜನ್ಯ ನಡೆಸುವ ಮೂಲಕ ಕಾನೂನು ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.೧೯ ರಂದು ಬೆಳಗಾವಿ ಆಧಿವೇಶನದಲ್ಲಿ ಭಾಗವಹಿಸಿದ್ದ ವೇಳೆ ನಡೆದ ವಿದ್ಯಮಾನಗಳ ಕುರಿತು ರಾಜ್ಯಪಾಲರು, ರಾಷ್ಟ್ರಪತಿ ಮತ್ತು ಬಿಜೆಪಿ ರಾಷ್ಟ್ರೀಯ, ರಾಜ್ಯ ಮುಖಂಡರನ್ನು ಡಿ.೨೬-೨೭ ರಂದು ಭೇಟಿಮಾಡಿ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆಂದರು.
ಒಳ್ಳೆಯ ಕೆಲಸಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿರುವ ಮತ್ತು ದೌರ್ಜನ್ಯ ಎಸಗಿರುವವರಿಗೆ ಶಿಕ್ಷೆ ಆಗುವ ತನಕ ಹೋರಾಟ ಮುಂದುವರೆಸುತ್ತೇನೆಂದು ಹೇಳಿದರು.
ಖಾನಾಪುರ ಪೊಲೀಸರು ನನ್ನನ್ನು ಬಂಧಿಸಿ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು. ಈ ಸಂದರ್ಭದಲ್ಲಿ ಸಂಕಷ್ಟದಿಂದ ಕಾಪಾಡು ಎಂದು ಯಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೂ ಹೋಗುತ್ತೇನೆ. ಜೊತೆಗೆ ಯಲ್ಲಮ್ಮನ ಬಳಿ ಹೋಗಿ ಹರಕೆ ತೀರಿಸುವುದಾಗಿ ತಿಳಿಸಿದರು.
ಸದನದಲ್ಲಿ ನಡೆದ ಘಟನೆಯ ವೇಳೆ ಸಿ.ಸಿ. ಟಿವಿ, ವಿಡಿಯೋ ಎಲ್ಲಾ ಇದೆ. ವಿಡಿಯೋ ಮಾಡಿದವರು ಯಾರೂ ಅಪರಿಚಿತರಲ್ಲ ಎಲ್ಲರೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಅವರ ಜೊತೆ ಇದ್ದವರೇ ಹಲ್ಲೆ ನಡೆಸಿದ್ದಾರೆ. ಅಂದು ದೂರು ಸಲ್ಲಿಸಿದ್ದರೂ ಈವರೆಗೆ ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಕಮಿಷನರ್ ಅಮಾನತ್ತಾಗಬೇಕು, ಸೆಕ್ಷನ್ ೧೩೫(ಎ) ಪ್ರಕಾರ ಶಾಸಕರಿಗೆ ವಿಶೇಷ ಸೌಲತ್ತು ಇದೆ. ಆದರೆ ಯಾವುದೇ ನೋಟೀಸ್ ನೀಡದೆ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಸುಮಾರು ನಾಲ್ಕು ಜಿಲ್ಲೆಗಳನ್ನು ಸುತ್ತಿಸಿ ಊಟ, ನೀರು, ಚಿಕಿತ್ಸೆ ನೀಡದೆ ಚಿತ್ರಹಿಂಸೆ ನೀಡಿದರು ಎಂದು ದೂರಿದರು.
ಪೊಲೀಸ್ ಠಾಣೆಯಲ್ಲಿ ಯಾವುದೇ ಬಿಜೆಪಿ ಸಭೆ ನಡೆದಿಲ್ಲ. ಘಟನೆಯ ಬಳಿಕ ಠಾಣೆಗೆ ಬಿಜೆಪಿ ನಾಯಕರು ಹಾಗೂ ಮುಖಂಡರು ಆಗಮಿಸಿದ್ದರು. ಅಲ್ಲಿ ಕಮಿಷನರ್ ಹಾಗು ವಿಪಕ್ಷ ನಾಯಕರು, ಶಾಸಕರು ಬಂದಿದ್ದರು. ಇದನ್ನು ಬಿಜೆಪಿ ಸಭೆ ಅನ್ನುವುದು ಸರ್ಕಾರದ ಪೂರ್ವಾಗ್ರಹ ಪೀಡಿತ. ಈ ಪ್ರಕರಣದಲ್ಲಿ ಎಸ್ಐ ಒಬ್ಬರನ್ನು ಅಮಾನತ್ತು ಮಾಡಿರುವುದು ಸರಿಯಲ್ಲ. ನಿಜವಾಗಿಯೂ ಕ್ರಮ ಆಗಬೇಕಿರುವುದು ಎಸ್ಪಿ ಮತ್ತು ಕಮಿಷನರ್ ಮೇಲೆ ಎಂದು ಹೇಳಿದರು.
ಸದನದಲ್ಲಿ ನಡೆದ ಘಟನೆ ಜಾತಿ ಸಂಘರ್ಷಕ್ಕೆ ತಿರುಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ ನಾನು ಹಿಂದುತ್ವವಾದಿ, ಹಿಂದುತ್ವಕ್ಕಾಗಿಯೇ ಬಂದವನು, ಜಾತಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲವೆಂದು ತಿಳಿಸಿದರು.
ಶಾಸಕ ಮುನಿರತ್ನ ಮೇಲಿನ ಹಲ್ಲೆಯನ್ನು ಖಂಡಿಸಿದ ಅವರು, ಹಲ್ಲೆ ನಡೆಸಿರುವ ಗೂಂಡಾಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತುರ್ತು ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಈ ಗೂಂಡಾಗಿರಿಗೆಲ್ಲ ಬಿಜೆಪಿ ಹಾಗೂ ನಾವು ಎದುರುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರ್ ವಾಜಪೇಯಿ ಅವರ ಸಾಧನೆಗಳನ್ನು ತೆರೆದಿಡುವ ಮೂಲಕ ಶತಮಾನೋತ್ಸವ ಜನ್ಮದಿನವನ್ನು ಸ್ಮರಿಸಿದರು.
ಬೆಳಗಾವಿಯಲ್ಲಿ ನಡೆದ ಘಟನೆ ಸಂದರ್ಭದಲ್ಲಿ ಮನೆಮಗ ಎಂಬುದನ್ನು ಗಟ್ಟಿಗೊಳಿಸಿ ನನ್ನ ಸಂಕಷ್ಟದಲ್ಲಿ ನೆರವಾಗಿರುವ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ, ಮುಖಂಡರುಗಳಾದ ಹಿರೇಮಗಳೂರು ಪುಟ್ಟಸ್ವಾಮಿ, ಕನಕರಾಜ್ ಅರಸ್, ಪುಷ್ಪರಾಜ್, ಕೆ.ಪಿ. ವೆಂಕಟೇಶ್, ಜೆಸೆಂತ ಅನಿಲ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Action should be taken against those who have misused the law.