ಚಿಕ್ಕಮಗಳೂರು: ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಮತ್ತು ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ಪರ್ವತವರ್ಧನ ಎಂ.ಎಲ್.ವಾಸುದೇವಮೂರ್ತಿ ಪ್ರೌಢಶಾಲೆಯ ಕ್ರೀಡೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ದೇಶದ ಭವಿಷ್ಯ ಅಡಗಿರುವುದು ಸಾಕ್ಷರತೆಯಲ್ಲಿ. ಯಾವುದೇ ರಾಷ್ಟ್ರ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ಜನತೆ ವಿದ್ಯಾವಂತರಾಗಬೇಕು. ಶಿಕ್ಷಣ ನಮ್ಮ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜದಲ್ಲಿ ಗೌರವ ಸ್ಥಾನಮಾನ ತಂದುಕೊಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ವಿದ್ಯೆಯ ಮಹತ್ವವನ್ನು ಅರಿಯಬೇಕು. ಶ್ರದ್ಧೆ, ಶಿಸ್ತು ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ವಿದ್ಯಾವಂತರಾಗುವ ಮೂಲಕ ದೇಶದ ಪ್ರಗತಿಗೆ ಕಾರಣರಾಗಬೇಕು ಎಂದು ಸಲಹೆ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜಯಶ್ರೀ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲರೊಳಗೊಂದಾಗಿ ಬದುಕುವುದನ್ನು ಕಲಿಯಬೇಕು. ಶ್ರದ್ದೆ, ಶಿಸ್ತು, ಸನ್ನಡತೆಯನ್ನು ಮೈಗೂಡಿಸಿಕೊಂಡು ಸಂಸ್ಥೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ಕೇಶವಮೂರ್ತಿ, ವಿದ್ಯಾರ್ಜನೆಗೆ ಕೊರತೆಯಾಗದಂತೆ ಸಂಸ್ಥೆಯಲ್ಲಿ ಎಲ್ಲ ರೀತಿಯ ಸೌಲಭ್ಯ. ಸವಲತ್ತುಗಳನ್ನೂ ಒದಗಿಸಲಾಗಿದ್ದು. ವಿದ್ಯಾರ್ಥಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾವಂತರಾ ಗಬೇಕು ಎಂದು ಸಲಹೆ ಮಾಡಿದರು.
ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಮಾರಂಭಕ್ಕೆ ಮುನ್ನ ನಡೆದ ಕ್ರೀಡೋತ್ಸವವನ್ನು ಸಂಸ್ಥೆಯ ನಿರ್ದೇಶಕಿ ಕಾಂತಾ ದೀಪಕ್ ಉದ್ಘಾಟಿಸಿದರು. ಶಿಕ್ಷಕ ಮಹೇಂದ್ರ ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮಿ, ಮುಖ್ಯ ಶಿಕ್ಷಕ ಜಿ.ಬಿ.ಸುರೇಶ್, ನ್ಯಾಯವಾದಿ ಪುಟ್ಟೇಗೌಡ, ಕ್ರೀಡಾಪಟು ಜಿ. ಸ್ವರ್ಣ ಗೌರಿ, ಶಿಕ್ಷಕರಾದ ರೂಪಾ ನಾಯಕ್, ಶೋಭಾ ಪ್ರಭು ಉಪಸ್ಥಿತರಿದ್ದರು.
At the sports festival and anniversary program of Parvathavardhana M.L. Vasudevamurthy High School