ಚಿಕ್ಕಮಗಳೂರು: ನಗರದ ಶ್ರೀ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅವರ ೫೧ ನೇ ದೀಪೋತ್ಸವ ಅಂಗವಾಗಿ ಭಾನುವಾರ ಸಾರ್ವಜನಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಯಿತು.
ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತಿತರರು ಅನ್ನಪೂಣೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಆಗಮಿಸಿ ಅನ್ನ ಪ್ರಸಾದವನ್ನು ಸೇವಿಸಿ ಕೃತಾರ್ಥರಾದರು. ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಮಾಜದಲ್ಲಿ ಎಲ್ಲಾ ಸಮಾಜದ ಯುವಕರು ಒಟ್ಟಾಗಿ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ವೃತಾಚರಣೆ ಮಾಡುವ ಮೂಲಕ ಸಮಾನತೆಯನ್ನು ತರುತ್ತಿರುವುದು ಅಯ್ಯಪ್ಪ ಸ್ವಾಮಿ ಪೂಜೆಯ ವಿಶಿಷ್ಠವಾಗಿದೆ ಎಂದರು.
ಕಳೆದ ೫೧ ವರ್ಷದಿಂದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ಅಯ್ಯಪ್ಪ ಸ್ವಾಮಿ ವೃತಾಚರಣೆ ಹಾಗೂ ಪೂಜಾ ವಿಧಿಗಳು ನಡೆದುಕೊಂಡು ಬಂದಿವೆ. ಅಂದಿನಿಂದ ಈಗಿನ ವರೆಗೆ ಹಲವರು ಇದನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಶರಣು ಅಯ್ಯಪ್ಪ ಸ್ವಾಮಿ ಆಶೀರ್ವಾದದಿಂದ ಎಲ್ಲರೂ ಶಾಂತಿ, ಸಮಾನತೆಯಿಂದ ಇರಬೇಕು. ಸ್ವಾಮಿಯ ಆಶೀರ್ವಾದಿಂದ ಉತ್ತಮ ಮಳೆ, ಬೆಳೆಯಿಂದ ಎಲ್ಲರೂ ಸಂತುಷ್ಟರಾಗಬೇಕು ಎಂದರು.
ಎಲ್ಲ ರೈತ, ಕಾರ್ಮಿಕರು, ವರ್ತರಕರು, ಶ್ರಮಿಕರ ಪಾಲಿಗೆ ಅಯ್ಯಪ್ಪ ಸ್ವಾಮಿ ಅವರ ಕೃಪೆ ಇರಲಿ, ಮುಂದಿನ ದಿನಗಳಲ್ಲಿ ಇನ್ನೂ ಚೆನ್ನಾಗಿ ಉತ್ಸವ ಆಚರಿಸಲುಸ ಸಹಕರಿಸುತ್ತೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಮಾದಲ್ಲಿರುವ ಎಲ್ಲಾ ಜಾತಿ, ಮತವನ್ನು ಮೀರಿ ಎಲ್ಲರೂ ಒಂದೆನ್ನುವ ಭಾವವನ್ನು ಬೆಳಸುವ ಸಲುವಾಗಿಯೇ ಅಯ್ಯಪ್ಪ ಸ್ವಾಮಿ ಅವರು ಶಬರಿ ಮಲೈನಲ್ಲಿ ನೆಲೆಸಿ ಎಲ್ಲರನ್ನೂ ಕರೆಸಿ ಭಕ್ತರಲ್ಲಿ ನಿಜ ಧರ್ಮ, ಭಕ್ತಿ ಭಾವವನ್ನು ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಅವರ ಕೃಪಾಶೀರ್ವಾದ ಸದಾ ಭಾರತದ ಮೇಲೆ, ಆಸ್ತಿಕ ಬಂಧುಗಳ ಮೇಲೆ ಇರಲಿ ಎಂದು ಹಾರೈಸಿದರು.
ನಗರಸಭೆ ಸದಸ್ಯ ಎ.ಸಿ.ಕುಮಾರ್, ಆಯುಕ್ತ ಬಿ.ಸಿ.ಬಸವರಾಜು ಸೇರಿದಂಎ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Ayyappaswamy Dipotsava: Public food offering