ಚಿಕ್ಕಮಗಳೂರು: ನಗರದ ಬೈಪಾಸ್ರಸ್ತೆಯಲ್ಲಿರುವ ಕಲ್ಯಾಣ ನಗರ ಬಡಾವಣೆಯನ್ನು ಒಂದು ಮಾದರಿ ಬಡಾವಣೆಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಅಸ್ಥಿತ್ವಕ್ಕೆ ಬಂದಿರುವ ಕಲ್ಯಾಣನಗರ ವೆಲ್ಫೇರ್ ಟ್ರಸ್ಟ್ನ ಎಲ್ಲಾ ರೀತಿಯ ಸೇವಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಕಲ್ಯಾಣ ನಗರ ಬಡಾವಣೆಲ್ಲಿ ಭಾನುವಾರ ಬೆಳಿಗ್ಗೆ ಕಲ್ಯಾಣ ನಗರ ವೆಲ್ಫೇರ್ ಸೊಸೈಟಿಯನ್ನು ಇಲ್ಲಿರುವ ಶ್ರೀ ವಿನಾಯಕ ದೇವಾಲಯದ ಮುಂಭಾಗ ಗಿಡನೆಟ್ಟು ಬಡಾವಣೆಯ ಸಂಪೂರ್ಣ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನಾನು ಕೂಡ ಈ ಬಡಾವಣೆಯ ನಿವಾಸಿಯಾಗಿದ್ದು, ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಕಲ್ಯಾಣನಗರದ ಪರಿಪೂರ್ಣ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಕಲ್ಯಾಣನಗರ ಬಡಾವಣೆಯಲ್ಲಿ ಎರಡು ಪಾರ್ಕ್ಗಳಿದ್ದು, ಇದರಲ್ಲಿ ಬಸವೇಶ್ವರ ಉದ್ಯಾನವನವನ್ನು ಚಿಕ್ಕಮಗಳೂರು ನಗರದಲ್ಲೇ ಒಂದು ಮಾದರಿ ಉದ್ಯಾನವನ್ನಾಗಿ ಮಾಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮುಂದಿನ ೬ ತಿಂಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಪಾರ್ಕಿನ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಕಲ್ಯಾಣನಗರ ವೆಲ್ಫೇರ್ ಸೊಸೈಟಿಯ ಗೌರವ ಅಧ್ಯಕ್ಷರಾಗಿರುವ ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಮಾಲೀಕರಾದ ಕಿಶೋರ್ಕುಮಾರ್ ಹೆಗ್ಡೆ ಮತ್ತು ಕಲ್ಯಾಣನಗರ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾಗಿರುವ ಉತ್ತಮ ಸಂಘಟಕ ಬಿ.ಎಸ್. ಹರೀಶ್ ಮತ್ತು ಅವರ ತಂಡದ ಹೆಗಲಿಗೆ ನೀಡುವುದಾಗಿ ಹೇಳಿದರು.
ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಆಶಯಗಳೊಂದಿಗೆ ಬಡಾವಣೆಯ ಸರ್ವಾಂಗೀಯ ಅಭಿವೃದ್ಧಿಗೆ ಪಣ ತೊಟ್ಟಿರುವ ಕಲ್ಯಾಣನಗರ ವೆಲ್ಫೇರ್ ಸೊಸೈಟಿ ಮೂಲಕ ಬಡಾವಣೆಯ ಸಂಪೂರ್ಣ ಅಭಿವೃದ್ಧಿಗೆ ಈ ಬಡಾವಣೆಯ ನಿವಾಸಿಗಳ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.
ಕಲ್ಯಾಣನಗರ ವೆಲ್ಫೇರ್ ಸೊಸೈಟಿಯ ಗೌರವಾಧ್ಯಕ್ಷ ಹಾಗೂ ಲೈಫ್ಲೈನ್ ಫೀಡ್ ಕಂಪನಿಯ ಮಾಲೀಕ ಕಿಶೋಕ್ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಕಲ್ಯಾಣನಗರ ಬಡಾವಣೆಯ ಪರಿಪೂರ್ಣ ಅಭಿವೃಧ್ಧಿ ದೃಷ್ಠಿಯಿಂದ ಅಸ್ಥಿತ್ವಕ್ಕೆ ಬಂದಿರುವ ಈ ಟ್ರಸ್ಟ್ ಮುಂದಿನ ಮೂರು ವರ್ಷಗಳಲ್ಲಿ ಚಿಕ್ಕಮಗಳೂರು ನಗರದಲ್ಲೇ ಒಂದು ಸುಂದರ ಬಡಾವಣೆಯನ್ನಾಗಿಸುವ ಉದ್ದೇಶ ತಮ್ಮದಾಗಿದ್ದು, ಈ ಕಾರ್ಯ ಯಶಸ್ವಿಯಾಗಲು ಸ್ಥಳೀಯ ನಿವಾಸಿಗಳ ಸಹಕಾರ ಬಹಳ ಮುಖ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲ್ಯಾಣನಗರ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಬಿ.ಎಸ್. ಹರೀಶ್ ಮಾತನಾಡಿ ಕೇವಲ ಮಾತು ಕೆಲಸವಾಗಬಾರದು. ಕೆಲಸ ಮಾತಾಗಬೇಕು ಎಂಬಂತೆ ಕಲ್ಯಾಣ ನಗರ ಬಡಾವಣೆಯ ಪರಿಪೂರ್ಣ ಅಭಿವೃದ್ಧಿ ದೃಷ್ಠಿಯನ್ನಿಟ್ಟುಕೊಂಡು ಇಂದು ಆರಂಭವಾಗಿರುವ ಕಲ್ಯಾಣ ನಗರ ವೆಲ್ಫೇರ್ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದೇ ಪಾರದರ್ಶಕ ಕಾರ್ಯನಿರ್ವಹಣೆಗೆ ಟ್ರಸ್ಟ್ ಬದ್ದವಾಗಿದ್ದು, ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ಸಿ.ಡಿ.ಎ. ಆಯುಕ್ತರಾದ ನಾಗರತ್ನ, ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ನಿಗಮದ ಅಧ್ಯಕ್ಷ ಬಿ.ಹೆಚ್. ಹರೀಶ್, ಸ್ಥಳೀಯ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ನಗರಸಭೆ ಸದಸ್ಯರಾದ ಅರುಣ್ಕುಮಾರ್, ಇಂದಿರಾ ಅವರು ಈ ಸಂದರ್ಭದಲ್ಲಿ ಮಾತನಾಡಿ ಕಲ್ಯಾಣನಗರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಲ್ಯಾಣ ನಗರ ಬಡಾವಣೆಯ ನಿವಾಸಿ ಸತ್ಯವತಿ ಮಾತನಾಡಿ ಕಲ್ಯಾಣ ನಗರ ಬಡಾವಣೆ ಅಭಿವೃಧ್ಧಿಗೆ ಸ್ಥಳೀಯರ ಸಹಕಾರವೂ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಕಲ್ಯಾಣ ನಗರ ವೆಲ್ಫೇರ್ ಟ್ರಸ್ಟ್ನ ಉಪಾಧ್ಯಕ್ಷೆ ಉಮಾ ನಾಗೇಶ್, ಕಾರ್ಯದರ್ಶಿ ವೇಣುಗೋಪಾಲ್, ಶ್ರೀ ವಿನಾಯಕ ಕಲ್ಯಾಣನಗರ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಎಸ್.ಎನ್. ಪ್ರಸನ್ನಕುಮಾರ್ ಉಪಸ್ಥಿತರಿದ್ದರು. ಟ್ರಸ್ಟ್ನ ನಿರ್ದೇಶಕ ಷಡಕ್ಷರಿ ಸ್ವಾಗತಿಸಿದರು. ಸುಧೀರ್ಕುಮಾರ್ ವಂದಿಸಿದರು. ಖಜಾಂಚಿ ಲಿಂಗರಾಜು ಕಾರ್ಯಕ್ರಮ ನಿರೂಪಿಸಿದರು.
Complete cleanliness drive near Sri Vinayaka Temple