ಚಿಕ್ಕಮಗಳೂರು: ಶ್ರೀ ಗುರುದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ಫಾತೇಹ ಮಾಡಲು ಶಾಖಾದ್ರಿ ವಂಶಸ್ಥರಿಗೆ ಅವಕಾಶ ನೀಡದ ಇಲ್ಲಿನ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಖಾದ್ರಿ ವಂಶಸ್ಥ ಸೈಯದ್ಫಖ್ರುದ್ದೀನ್ ಶಾಖಾದ್ರಿ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೈಯದ್ ಬುಡನ್ ಶಾಖಾದ್ರಿ ವಂಶಸ್ಥರಾದ ನಾವು ಡಿ.೨೯ ರಂದು ಬಾಬಾಬುಡನ್ದರ್ಗಾದಲ್ಲಿ ಹಿಂದಿನಂತೆ ಫಾತೇಹ ಮಾಡಲು ಹೋಗಿದ್ದೆವು. ಆದರೆ ಹೊಸದಾಗಿ ನೇಮಕಗೊಂಡ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಇಓ ಅವರು ನಮ್ಮ ಧಾರ್ಮಿಕ ಆಚರಣೆ ಫಾತೇಹ ಮಾಡದಂತೆ ಪೊಲೀಸರ ಮೂಲಕ ತಡೆದು ನಮ್ಮ ಧಾರ್ಮಿಕ ಹಕ್ಕನ್ನು ನಿರಾಕರಿಸಿದ್ದಾರೆ ಎಂದು ದೂರಿದರು.
ಮೇಲಿನವರ ಸೂಚನೆಯಂತೆ ನಾನು ಕಾರ್ಯನಿರ್ವಹಿಸುತ್ತೇನೆ ಎಂದು ಪದೇ ಪದೇ ಹೇಳುವ ಈ ಅಧಿಕಾರಿ ಫಾತೇಹಕ್ಕೆ ತೆರಳಬೇಕು ಎಂದಾದಲ್ಲಿ ಹಿಂದೂ ಪದ್ದತಿಯಂತೆ ಹಣ್ಣುಕಾಯಿ ತನ್ನಿ ಎಂದು ಹೇಳುವ ಮೂಲಕ ನಮ್ಮ ಮೊಹಮದನ್ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಶಾಖಾದ್ರಿ ವಂಶಸ್ಥರು, ಗುರುಗಳಾಗಿ ಗುರುತಿಸಲ್ಪಡುವ ನಮಗೆ ಅವಮಾನ ಮಾಡಿದ್ದಾರೆ.
೧೯೪೭ ರ ಹಿಂದೆ ಇರುವ ಮೈಸೂರು ಗ್ಯಾಸೆಟಿಯರ್ ನೋಡಿ, ಸರ್ವೋಚ್ಛ ನ್ಯಾಯಾಲಯದ ಆದೇಶ ಪಾಲನೆ ಮಾಡಿ ಎಂದು ಅಧಿಕಾರಿಗೆ ಹೇಳಿದರೆ ನಮಗೆ ಅದು ಮುಖ್ಯವಲ್ಲ ವ್ಯವಸ್ಥಾಪನಾ ಸಮಿತಿ ಮತ್ತು ಸರಕಾರದ ಆದೇಶ ಮುಖ್ಯ ಎಂದು ನ್ಯಾಯಾಲಯಕ್ಕೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಈ ಅಧಿಕಾರಿ ಒಂದು ಸಮುದಾಯದ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ಅಧಿಕಾರಿ ಮತ್ತು ಅವರ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆತನನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ದರ್ಗಾ ಸಂಸ್ಥೆ ಆಚರಣೆಗಳನ್ನು ನಿರ್ವಹಿಸಲು ಹಿಂದಿನಂತೆ ಶಾಖಾದ್ರಿಗಳ ಸಮಿತಿಯನ್ನು ಸರಕಾರ ರಚಿಸಬೇಕು. ಇಲ್ಲವಾದರೆ ನ್ಯಾಯಾಲಯದ ತೀರ್ಮಾನ ಬರುವತನಕ ಜಾತ್ಯಾತೀತ ಕಾರ್ಯನಿರ್ವಹಕಾ ಅಧಿಕಾರಿ ಮತ್ತು ಜಾತ್ಯಾತೀತ ಸಮಿತಿಯನ್ನು ರಚನೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಬ್ರಾರ್, ಶಾಬಾಜ್, ತನ್ವೀರ್ ಅಹ್ಮದ್ ಖಾದ್ರಿ ಮತ್ತಿತರರಿದ್ದರು.
Action taken against executive officer who did not allow Fateha