ಚಿಕ್ಕಮಗಳೂರು: ಕೃಷಿ ಕ್ಷೇತ್ರವನ್ನು ಲಾಭದ ದೃಷ್ಟಿಯಿಂದ ನೋಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಆಹಾರ ಪದ್ದತಿಗಳ ಬದಲಾವಣೆಗಾಗಿ ಸಾವಯವ ಕೃಷಿಗೆ ಹಾಗೂ ಸಿರಿಧಾನ್ಯಗಳಿಗೆ ಉತ್ತೇಜನ ನೀಡಲು ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ.ಎಸ್ ಆನಂದ್ ತಿಳಿಸಿದರು.
ಆಹಾರ ಸಂಸ್ಕರಣಾ ಮಂತ್ರಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಏಂPPಇಅ), ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬ ೨೦೨೪-೨೫ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ಸಮಸ್ಯೆ ನಿವಾರಣೆಗೆ ಸಿರಿಧಾನ್ಯ ಬಹಳ ಮಹತ್ವ ಪಡೆಯುತ್ತಿದೆ. ಹಿಂದಿನ ಬಡವರ ಆಹಾರ ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳು ಇಂದಿನ ಶ್ರೀಮಂತರ ಆಹಾರಗಳಾಗಿ ಬದಲಾಗಿ ಮಹತ್ವ ಪಡೆದುಕೊಂಡಿವೆ ಎಂದು ಹೇಳಿದರು.
ಜನ ಸಾಮಾನ್ಯರು ಮತ್ತು ಯುವಜನಾಂಗಕ್ಕೆ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮಹತ್ವ ಕುರಿತು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದ ಅವರು, ಹಿಂದಿನ ಕೃಷಿ ಪದ್ದತಿಯನ್ನು ತಿಳಿಸುವ ದೃಷ್ಟಿಯಿಂದ ರಾಜ್ಯಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೊತೆಗೆ ಈ ರೀತಿ ಸಿರಿಧಾನ್ಯಗಳ ಹಬ್ಬ ಆಚರಣೆ ಮಾಡುತ್ತಿದೆ ಎಂದರು.
ಇಲ್ಲಿ ಹಾಕಲಾಗಿರುವ ಮಳಿಗೆಗಳಲ್ಲಿ ಹಳೆಯ ಕೃಷಿ ಪರಿಕರಗಳಾದ ಕುಂಟೆ, ನೇಗಿಲು, ಎಡೆಗುಂಟೆ, ಕೂರಿಗೆ, ನೆರಕೋಲು ಸೇರಿದಂತೆ ಎಲ್ಲವನ್ನೂ ನೋಡಿದ ಮೇಲೆ ಸಂತೋಷವಾಯಿತು. ಮತ್ತೊಮ್ಮೆ ಇವುಗಳನ್ನು ನೆನಪಿಸಿದ್ದಕ್ಕೆ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ರೈತರ ಸಾಂಪ್ರದಾಯಿಕ ಹಬ್ಬ ಕಾರ ಹಬ್ಬದ ಸಂದರ್ಭದಲ್ಲಿ ಮಾತ್ರ ಈ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿ ಕೃಷಿ ಆರಂಭಿಸುತ್ತಿದ್ದರು. ಆದರೆ ಇವೆಲ್ಲಾ ಆಧುನಿಕತೆಯ ಭರಾಟೆಯಲ್ಲಿ ಮರೀಚಿಕೆಯಾಗಿದೆ ಎಂದು ವಿಷಾಧಿಸಿದರು.
ಪ್ರಸ್ತುತ ಯುವಪೀಳಿಗೆಗೆ ಹಳೇ ಸಾಂಪ್ರದಾಯಿಕ ಕೃಷಿಪದ್ದತಿ, ಸಾವಯವ ಕೃಷಿ ಮತ್ತು ಸಿರಿಧಾನ್ಯದ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ರಾಸಯನಿಕ ಮುಕ್ತ ಸಂಪೂರ್ಣ ಆರೋಗ್ಯ ಪೂರ್ಣವಾದ ಆಹಾರ ಬೆಳೆಯಲು ಮುಂದಾಗಬೇಕೆಂದು ಕರೆ ನೀಡಿದರು.
ಹಿಂದೆ ಜಮೀನಿನಲ್ಲಿ ಕೆಲಸ ಮಾಡುವಾಗ ಊಟಕ್ಕೆ ಕುಳಿತರೆ ಎರೆಹುಳುಗಳು ತಂಡೋಪ ತಂಡವಾಗಿ ಬರುತ್ತಿದ್ದವು. ಉಜ್ವಲ ಬೆಳೆ ಬಂದು ರೈತರ ಬದುಕು ಇದರಿಂದ ಹಸನಾಗುತ್ತಿತ್ತು. ಇಂದು ಯಾವುದೇ ತೋಟ, ಜಮೀನುಗಳಿಗೆ ಹೋದರೆ ಮುಖ್ಯವಾಗಿ ಭೂಮಿಯಲ್ಲಿ ಎರೆಹುಳುಗಳನ್ನು ಕಳೆದುಕೊಂಡಿದ್ದೇವೆ. ರಾಸಾಯನಿಕಗಳಾದ ಕಳೆನಾಶಕ ಸಿಂಪರಣೆ, ಕೀಟನಾಶಕ ಔಷಧಿಗಳ ಬಳಕೆಯಿಂದಾಗಿ ಇವೆಲ್ಲಾ ನಾಶವಾಗಿವೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಎದುರಾಗುತ್ತಿರುವ ರೋಗರುಜಿನಗಳ ಮುಕ್ತಿಗೆ ಸಿರಿಧಾನ್ಯ ಬಳಕೆ ಉಪಯುಕ್ತ ಆಹಾರ. ಶಕ್ತಿಯುತ ಆಹಾರದ ಕೊರತೆಯನ್ನು ಇಂದು ಕಾಣುತ್ತಿದ್ದೇವೆ. ಅದರ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಬಳಕೆಯಿಂದ ದೇಹಕ್ಕೆ ಬೇಕಾದ ಕಬ್ಬಿಣ, ಲವಣಾಂಶ ಹೆಚ್ಚು ಲಾಭವಾಗುತ್ತಿದೆ, ಈ ನಿಟ್ಟಿನಲ್ಲಿ ಸಿರಿಧಾನ್ಯ ಬಳಕೆ ಹಾಗೂ ಬೆಳೆಯಲು ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಆಹಾರ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ಕೇಕ್, ಚಕ್ಕುಲಿ, ನಿಪ್ಪಟ್ಟು, ಸಿಹಿ ತಿನಿಸುಗಳು ಏನೆಲ್ಲಾ ಆಹಾರ ಪದಾರ್ಥ ತಯಾರಿಸಬಹುದೋ ಅವುಗಳನ್ನೆಲ್ಲಾ ಇಲ್ಲಿ ಕಾಣುವುದರ ಜೊತೆಗೆ ಇವು ಹಳೆಯ ಆರೋಗ್ಯ ಪೂರ್ಣ ಆಹಾರ ಎಂಬುದನ್ನು ಸಾಭೀತುಪಡಿಸಿವೆ. ಮನೆಗಳಲ್ಲಿ ಹೆಚ್ಚಾಗಿ ಸಿರಿಧಾನ್ಯದ ಉಪಯೋಗದ ಬಗ್ಗೆ ಅರಿವು ಮೂಡಿಸಿ ಬಳಸುವಂತಾಗಬೇಕು ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ಸಿರಿಧಾನ್ಯ ಹಬ್ಬಕ್ಕೆ ಸಹಕರಿಸಿದ ಶಾಸಕರು, ಪ್ರಗತಿಪರ ರೈತರು ಹಾಗು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಬಸವಾನಂದ ಮಹಾಸ್ವಾಮೀಜಿ ಮಾತನಾಡಿ, ರಾಗಿ ಉಂಬುವವನು ನಿರೋಗಿ, ಅಕ್ಕಿ ಉಂಬುವವನು ಹಕ್ಕಿಯಂತಾಗುವನು, ಸಿಕ್ಕು ರೋಗದಲಿ ವೈದ್ಯನಿಗೆ ರೊಕ್ಕವನ್ನು ಇಕ್ಕುತ್ತಲಿರುವನು ಎಂಬ ಸರ್ವಜ್ಞನ ನುಡಿಯನ್ನು ಪ್ರಸ್ತಾಪಿಸಿದರು.
ಅಕ್ಕಿಯನ್ನು ಹೆಚ್ಚು ಉಪಯೋಗಿಸಿದರೆ ಮೂಳೆಗಳು ದುರ್ಬಲವಾಗುತ್ತವೆ. ಗರ್ಭಕೋಶ ಗಟ್ಟಿಯಾಗಿಲ್ಲದ ಪರಿಣಾಮ ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ಅಲ್ಯೂಮಿನಿಯಂ ಪಾತ್ರೆ, ಕುಕ್ಕರ್ಗಳಿಂದ ಆಹಾರ ತಯಾರಿಸುತ್ತಿರುವುದರಿಂದ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ. ಜೊತೆಗೆ ಆಹಾರ ಪದ್ದತಿಯಲ್ಲಿ ಬಹಳ ದೋಷ ಮಾಡಿಕೊಂಡಿರುವುದರಿಂದ ಇವೆಲ್ಲವಕ್ಕೂ ಕಾರಣ. ಹಿಂದೆ ಮಣ್ಣಿನ ಮಡಿಕೆಯಿಂದ ಆಹಾರ ತಯಾರು ಮಾಡುತ್ತಿದ್ದರು ಎಂದು ಹೇಳಿದರು.
ಭಾರತದಲ್ಲಿ ಇಡೀ ಆಹಾರದಲ್ಲಿ ಅನ್ನ ಎಂದು ಹೇಳುತ್ತಿದ್ದರು. ಭತ್ತ ತೆಗೆದು ಅಕ್ಕಿ ಮಾಡುತ್ತೇವೆ. ಇಂದು ಅಕ್ಕಿಯನ್ನು ಅಭಿವೃದ್ಧಿಪಡಿಸಿ ಸಾವಿರಾರು ತಳಿಗಳನ್ನು ಸಂಶೋಧಿಸಿದ್ದೇವೆ ಅದರೆ ಹಿಂದಿನ ಕುಟ್ಟಿ ತೆಗೆದ ಅಕ್ಕಿಯ ರುಚಿ ಈಗ ಬರುವುದಿಲ್ಲ ಎಂದು ವಿಷಾಧಿಸಿದರು.
ಮೂರೊತ್ತು ಅಕ್ಕಿ ತಿನ್ನುವುದನ್ನು ಬಿಟ್ಟು ಪಾಲೀಶ್ ಆಗದ ಅನ್ನದ ಗಂಜಿ ಮಾಡಿ ಊಟ ಮಾಡಿದರೆ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗಿ ಸಕ್ಕರೆಯನ್ನು ದೇಹಕ್ಕೆ ನೀಡಿ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಿವಮೊಗ್ಗ ವಿ.ವಿ ಉಪಕುಲಪತಿ ಜಗದೀಶ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಂತೃಪ್ತ ಸಿರಿಧಾನ್ಯಗಳ ಉದ್ಯಮಿ ಮಂಜುನಾಥ್, ಮಾಜಿ ಜಿ.ಪಂ ಸದಸ್ಯೆ ಹೇಮಾವತಿ, ಆನಂದ್ ಗುರೂಜಿ, ಚಂದ್ರಶೇಖರ್ ನಾರಾಯಣಪುರ, ಶಂಕರ್ ನಾಯಕ್, ರವಿ, ಈಶ್ವರಪ್ಪ, ಕೆಂಗೇಗೌಡ, ಚಿದಾನಂದಮೂರ್ತಿ, ರಜಿತ್, ಸಂತೋಷ್ ಉಪಸ್ಥಿತರಿದ್ದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಹಂಸವೇಣಿ ಸ್ವಾಗತಿಸಿದರು.
District Level Organic and Cereal Festival 2024-25