ಚಿಕ್ಕಮಗಳೂರು; ಸರಕಾರಿ ಶಾಲಾ, ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹೆಚ್ಚು. ಅವರು ನಾಟಿ ಹಣ್ಣಿದ್ದಂತೆ ಸಿಹಿ ಜಾಸ್ತಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಸಹಪಠ್ಯ ಚಟುವಟಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಸರಕಾರಿ ಜ್ಯೂನಿಯರ್ ಕಾಲೇಜು ಜಿಲ್ಲೆಯ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದು. ಇಲ್ಲಿನ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಇಲ್ಲಿ ಓದಿದವರು ಸಮೃದ್ಧಬದುಕು ಕಟ್ಟಿಕೊಂಡಿದ್ದಾರೆ. ಸರಕಾರಿ ಶಾಲೆಯಲ್ಲಿ ಓದಿದ ಅಬ್ದುಲ್ಕಲಂ, ವಿಶ್ವೇಶ್ವರಯ್ಯ ಮತ್ತಿತರೆ ಗಣ್ಯರು ಜನಮಾನಸದಲ್ಲಿ ನೆಲಯೂರಲು ಸರಕಾರಿ ಶಾಲಾ, ಕಾಲೇಜುಗಳೇ ಮೂಲ ಕಾರಣ ಎಂದು ಹೇಳಿದರು.
ವಿಧಾಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯಾದದಾತಿ ವಿನಯಂ ಎನ್ನುವಂತೆ ವಿದ್ಯೆ ಕಲಿಯುತ್ತಿರುವ ವಿದ್ಯಾರ್ಥಿಗಳು ವಿನಯ ಬೆಳೆಸಿಕೊಳ್ಳಿ. ೩೮ ವರ್ಷದ ಹಿಂದೆ ಪಿಯುಸಿ ಓದುತ್ತಿದ್ದ ದಿನಗಳು ಇಂದು ನೆನಪಾಗುತ್ತಿದೆ. ಓದು ಒಕ್ಕಾಲು, ಬುದ್ದಿ ಮುಕ್ಕಾಲು ಹಿಂದಿನ ಗಾದೆ ಇಂದು ಒಕ್ಕಲು ಓದು ಮುಕ್ಕಾಲು ಬುದ್ದಿ ಎಂಬುದು ಈಗಿನ ಗಾದೆ ಎಂದರು.
ಬುದ್ದಿವಂತನಾದವನು ಎಂತಹ ಅಪಾಯ ಸ್ಥಿತಿಯಲ್ಲಿದ್ದರೂ ಪಾರಾಗಬಲ್ಲ ಎಂದರು. ಹಿಂದಿನ ಅವಯಲ್ಲಿ ಎಂಆರ್ಪಿಎಲ್ ಸಂಸ್ಥೆಯ ಸಿಎಸ್ಆರ್ ನಿ ೭೫ ಲಕ್ಷರೂ ವೆಚ್ಚದಲ್ಲಿ ಒಂದು ಕಟ್ಟಡ, ಆರ್ಐಡಿಎಫ್ ಯೋಜನೆಯಡಿ ೨ ಕೋಟಿ ರೂ.ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.
ವಾಗ್ಮಿ ಮಹೇಶ್ ಪ್ರಧಾನ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಸನ್ನಡತೆ ಬೀಜಬಿತ್ತಬೇಕು. ಗುರುಗಳಿಗೆ ಗೌರವಿಸುವ ಸದ್ಗುಣ ತುಂಬಬೇಕು. ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಜಿ.ಬಿ.ವಿರೂಪಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಜ್ಯೂನಿಯರ್ ಕಾಲೇಜು ಆಳವಾಗಿ ಬೇರೂರಿರುವ ಅಶ್ವತ್ಥ ಮರ, ಇಲ್ಲಿ ವಿದ್ಯಾರ್ಜನೆ ಮಾಡಿರುವ ವಿದ್ಯಾರ್ಥಿಗಳು ರಾಜಕೀಯ, ಶೈಕ್ಷಣಿಕ ಹಾಗು ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಡಿಡಿಪಿಯು ಪುಟ್ಟಾನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಫೀಕ್ ಅಹ್ಮದ್, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಪೈ, ಸದಸ್ಯರಾದ ಪ್ರಜ್ವಲ್, ಸೀತರಾಮನ್, ಸುರೇಶ್ ಮತ್ತಿತರರಿದ್ದರು.
Junior College Anniversary