ಚಿಕ್ಕಮಗಳೂರು: ನಕ್ಸಲ್ ಮುಖಂಡ ಶೃಂಗೇರಿಯ ಕೋಟೆಹೊಂಡ ರವೀಂದ್ರ ಶನಿವಾರ ಜಿಲ್ಲಾಡಳಿತದೆದುರು ಶರಣಾಗತನಾಗಿದ್ದಾನೆ.
ನಕ್ಸಲ್ ಶರಣಾಗತಿ ಪ್ರಕ್ರಿಯೆಯ ನೋಡಲ್ ಅಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ಮತ್ತು ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ್ ಇತರರು ನಕ್ಸಲ್ ರವೀಂದ್ರನನ್ನು ಶೃಂಗೇರಿಯ ನೆಮ್ಮಾರಿನಿಂದ ಶನಿವಾರ ಬೆಳಗ್ಗೆ ಕರೆ ತಂದರು.
ಮಧ್ಯಾಹ್ನ ೧ ಗಂಟೆ ಸುಮಾರಿಗೆ ನಗರಕ್ಕಾಗಮಿಸಿದ ಅವರನ್ನು ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಕರೆತಂದು ಎಸ್ಪಿ ಡಾ.ವಿಕ್ರಮ ಅಮಟೆ ಅವರ ಎದುರು ಹಾಜರುಪಡಿಸಲಾಯಿತು.
ನಂತರ ಅವರನ್ನು ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜು ಅವರ ಎದುರು ಹಾಜರುಪಡಿಸಲಾಯಿತು. ಈ ವೇಳೆ ಶರಣಾಗತಿ ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಇದ್ದರು.
ನಂತರ ನಕ್ಸಲ್ ರವೀಂದ್ರನನ್ನು ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರವೀಂದ್ರನನ್ನು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ತಿಳಿಸಿದ ಎಸ್ಪಿ ಡಾ.ವಿಕ್ರಮ ಅಮಟೆ ಅವರು, ನಂತರ ಆತನನ್ನು ವಶಕ್ಕೆ ಪಡೆದು ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ವಿಚಾರಣೆಗೊಳಪಡಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.
೨೦೦೭ ರಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯನಾಗಿದ್ದ ರವೀಂದ್ರನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪ್ರಕರಣಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಒಟ್ಟು ೧೭ ಪ್ರಕರಣಗಳು ಹಾಗೂ ಹೊರ ರಾಜ್ಯಗಳಲ್ಲಿ ೧೦ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು.
೭.೫ ಲಕ್ಷ ರೂ. ಹಣ: ಜಿಲ್ಲಾಡಳಿತದ ಎದುರು ಶರಣಾಗಿರುವ ನಕ್ಸಲ್ ರವೀಂದ್ರ ರಾಜ್ಯ ಸರ್ಕಾರದ ಶರಣಾಗತಿ ಪ್ಯಾಕೇಜ್ನ ಎ ವರ್ಗಕ್ಕೆ ಸೇರಿದ್ದು, ಆತನಿಗೆ ೭.೫ ಲಕ್ಷ ರೂ. ಹಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ನಕ್ಸಲ್ ಶರಣಾಗತಿ ಸಮಿತಿಯ ಜಿಲ್ಲಾಧ್ಯಕ್ಷರೂ ಆದೆ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ನಕ್ಸಲ್ ರವೀಂದ್ರನ ಶರಣಾಗತಿ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತ್ವರಿತಗತಿಯಲ್ಲಿ ರವೀಂದ್ರ ಶರಣಾಗತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ತಕ್ಷಣ ಪ್ರಸ್ತಾವನೆಯನ್ನು ರಾಜ್ಯ ಸಮಿತಿಗೆ ಕಳಿಸಲಾಗುವುದು ಅಲ್ಲಿಂದ ಅನುಮತಿ ಸಿಕ್ಕ ತಕ್ಷಣಕ್ಕೆ ರವೀಂದ್ರ ಅವರ ಖಾತೆಗೆ ೩ ಲಕ್ಷ ರೂ. ಹಣ ಜಮಾ ಮಾಡಲಾಗುವುದು. ಉಳಿದ ಹಣವನ್ನು ಮುಂದಿನ ಎರಡು ಕಂತುಗಳಗಲ್ಲಿ ನೀಡಲಾಗುವುದು ಎಂದು ಹೇಳಿದರು.
ಆತ ಕೌಶಲ್ಯ ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಮಾನ್ಯತೆ ಪಡೆದ ತರಬೇಕತಿ ಸಂಸ್ಥೆಗೆ ದಾಖಲಾದ ನಂತರ ಎರಡು ವರ್ಷಗಳ ವರೆಗೆ ಪ್ರತಿ ತಿಂಗಳಿಗೆ ೫ ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡಲಾಗುದು ಹಾಗೂ ಔಪಚಾರಿಕ ಶಿಕ್ಷಣ ಪಡೆಯಲು ಎರಡು ವರ್ಷಗಳ ವರೆಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದರು.
ಇತ್ತೀಚಿಗೆ ಮುಖ್ಯಮಂತ್ರಿಗಳ ಎದುರು ಶರಣಾಗಿರುವ ಆರು ಮಂದಿ ನಕ್ಸಲೀಯರಿಗೂ ಮೊದಲ ಕಂತಿನ ಹಣವನ್ನು ಅವರ ಖಾತೆಗೆ ಈಗಾಗಲೇ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನಕ್ಸಲೀಯರು ಮುಂದಿಟ್ಟಿರುವ ಮೂಲ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಿ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಕ್ಕೆ ತರಲಾಗುವುದು. ಈಗಾಗಲೇ ಹಕ್ಕು ಪತ್ರ, ವಿದ್ಯುತ್, ಕುಡಿಯುವ ನೀರು, ಮನೆಗಳ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ನಕ್ಸಲ್ ಶರಣಾಗತಿ ಸಮಿತಿ ಅಧ್ಯಕ್ಷರೂ, ಜಿಲ್ಲಾಧಿಕಾರಿಗಳೂ ಆದ ಸಿ.ಎನ್.ಮೀನಾ ನಾಗರಾಜು, ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಶರಣಾಗತಿ ಸಮಿತಿ ಸದಸ್ಯರಾದ ಕೆ.ಪಿ.ಶ್ರೀಪಾಲ್, ಶಾಂತಿಗಾಗಿ ನಾಗರೀಕ ಹೋರಾ ಸಮಿತಿ ಸದಸ್ಯರುಗಳಾದ ಕೆ.ಎಲ್.ಅಶೋಕ್ ನಗರಗೆರೆ ರಮೇಶ್, ವಿ.ಎಸ್.ಶ್ರೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.
Naxal leader surrenders to Sringeri Kotehonda Ravindra District Administration