ಚಿಕ್ಕಮಗಳೂರು: ಸರ್ಕಾರದ ನಿರ್ದೇಶನದಂತೆ ಜಾತಿ, ಸಾಮಾಜಿಕ ಸಮೀಕ್ಷೆಯನ್ನು ಸಮಗ್ರ ಮಾಹಿತಿಯೊಂದಿಗೆ ವರದಿಯನ್ನು ತಯಾರಿಸಿ ಮೇ.೧೭ ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ನೋಡಲ್ ಅಧಿಕಾರಿ ದೇವರಾಜ್ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಡಾ. ಹೆಚ್.ಎನ್ ನಾಗಮೋಹನ್ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ೨೦೨೫ ರ ತಾಲ್ಲೂಕು ಮಟ್ಟದ ಮೇಲ್ವಿಚಾರಕರು ಮತ್ತು ಗಣತಿದಾರರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇವರುಗಳ ನೇತೃತ್ವದಲ್ಲಿ ಶಿಕ್ಷಕರಿಗೆ ಸಮೀಕ್ಷೆ ನಡೆಸಲು ನಿಯೋಜನೆಗೊಂಡಿರುವ ಎಲ್ಲರಿಗೂ ಇಂದು ತರಬೇತಿ ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರತೀ ಮನೆ ಮನೆಗೆ ಭೇಟಿ ನೀಡುವ ಮೂಲಕ ಸರ್ಕಾರ ನೀಡಿರುವ ಕೈಪಿಡಿಯಲ್ಲಿ ಕುಟುಂಬದ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಮಟ್ಟದ ಸಮೀಕ್ಷೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಾಲತಿ ಮಾತನಾಡಿ, ನ್ಯಾ. ಹೆಚ್.ಎನ್, ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಗಣತಿ ಸಮೀಕ್ಷೆಯನ್ನು ಸಂಗ್ರಹಿಸಲು ಇಂದು ತರಬೇತಿ ನೀಡುತ್ತಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನ ಬದ್ಧವಾದ ಮೂಲಭೂತ ಹಕ್ಕುಗಳು ಹಾಗೂ ಸಮಾನತೆ ಹಕ್ಕುಗಳ ಅನ್ವಯ ಈ ವಿಚಾರಣಾ ಆಯೋಗವನ್ನು ರಚನೆ ಮಾಡಲಾಗಿದೆ ಎಂದರು.
ಭಾರತದಲ್ಲಿ ವಾಸಿಸುವ ಎಲ್ಲರೂ ಕಾನೂನಿನಂತೆ ಸಮಾನರು, ಸಮಾನತೆ, ಶೋಷಣೆ ವಿರುದ್ಧದ ಹಕ್ಕು, ಸ್ವಾತಂತ್ರ್ಯದ ಹಕ್ಕು, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಬಗ್ಗೆ ಸಂವಿಧಾನಾತ್ಮಕ ಪರಿಹಾರಗಳ ಕುರಿತು ಈ ಎಲ್ಲಾ ಹಕ್ಕುಗಳಲ್ಲಿ ಬಹುಮುಖ್ಯವಾದುದು ಲಿಂಗಬೇಧ, ಜಾತಿಬೇಧವಿಲ್ಲದ ಸಮಾನತೆಯ ಹಕ್ಕು ಎಂದು ತಿಳಿಸಿದರು.
ಸರ್ಕಾರದಿಂದ ದೊರೆಯಬಹುದಾದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಪ್ರಸ್ತುತ ಕೆಲವೊಂದು ಜಾತಿಗಳಿಗೆ ಸೀಮಿತವಾಗಿದ್ದು, ಇನ್ನುಳಿದವರಿಗೂ ಸರ್ಕಾರದ ಫಲ ದೊರಕಬೇಕೆಂಬ ನಿಟ್ಟಿನಲ್ಲಿ ನ್ಯಾ. ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿ ತಾರತಮ್ಯ ನಿವಾರಣೆಗೆ ಸರ್ಕಾರ ಮುಂದಾಗಿದೆ ಎಂದರು.
ಸಮಾಜದ ಮುಖ್ಯ ವಾಹಿನಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರನ್ನು ತರಲು ಅವರ ಶೈಕ್ಷಣಿಕ ಮಟ್ಟ ಹೇಗಿದೆ ಎಂಬುದರ ಬಗ್ಗೆ ಅವಲೋಕಿಸಲು ಈ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸೌಲಭ್ಯಗಳು ಸಮಾನವಾಗಿ ಸರ್ವರಿಗೂ ತಲುಪಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ವಿಜಯ್ ಕುಮಾರ್, ಬಿಇಓ ರವೀಶ್.ಹೆಚ್.ಸಿ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಾದ ಕಾಂತರಾಜ್, ತಾಲ್ಲೂಕು ಸಹಾಯಕ ಕಾರ್ಮಿಕ ಅಧಿಕಾರಿ ರೇವಣ್ಣ, ಆರ್ಪಿಗಳಾದ ಟಿಜಿಕೆ ಅರಸ್, ವೀರೇಶ್ ಕೌಲಗಿ, ಪ್ರಶಾಂತ್.ಎಸ್.ಬಿ, ಸುರೇಶ್, ಶಿವಕುಮಾರ್ ಉಪಸ್ಥಿತರಿದ್ದರು.
Caste Social Survey report to be submitted to the government on May 17