ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಮಣ್ಣನಗಂಡಿ ಬಳಿ ಕಳೆದ 24 ಗಂಟೆಗಳೊಳಗೆ ಒಂದು ಹಿಂದೊಂದು ಮೂರು ಕಾರುಗಳು ಪಲ್ಟಿಯಾದ ಘಟನೆ ಉಂಟಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದೆ ಚಾಲಕರು ನಿಯಂತ್ರಣ ಕಳೆದುಕೊಂಡು ಈ ಅವಘಡಗಳು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಸಂಭವಿಸಿದ ಪ್ರಥಮ ಅಪಘಾತದ ನಂತರ, ಅದೇ ಸ್ಥಳದಲ್ಲಿ ಇನ್ನೂ ಎರಡು ಕಾರುಗಳು ಪಲ್ಟಿಯಾದವು. ಒಂದು ಕಾರು ನೇರವಾಗಿ ಹೇಮಾವತಿ ನದಿಗೆ ಬಿದ್ದಿದ್ದು, ಇನ್ನೊಂದು ಕಾರು ರಸ್ತೆಯ ಬದಿಯ ಎಡೆದಾರಿಗೆ ಜಾರಿದೆ. ವಾಹನ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬಣಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅವೈಜ್ಞಾನಿಕ ಮತ್ತು ಅಸುರಕ್ಷಿತ ಎಂದು ಟೀಕಿಸಿದ್ದು, ಇದನ್ನು ಅಪಘಾತಗಳಿಗೆ ಕಾರಣವಾಗುತ್ತಿರುವುದಾಗಿ ಆರೋಪಿಸಿದ್ದಾರೆ. ಹೆದ್ದಾರಿ ಬದಿ ಎಚ್ಚರಿಕೆ ಫಲಕಗಳ ಹಾಗೂ ಸರಿಯಾದ ನಿಕಾಸಿ ವ್ಯವಸ್ಥೆಯ ಕೊರತೆಯು ಮಳೆಯ ಸಮಯದಲ್ಲಿ ವಾಹನ ಚಾಲನೆಗೆ ಭಾರೀ ಅಡಚಣೆಯಾಗುತ್ತಿದೆ ಎಂಬುದು ಸ್ಥಳೀಯರ ವಾದ.
ಅಪಘಾತದ ಬಳಿಕ ಸ್ಥಳೀಯ ಯುವಕರಾದ ‘ಬಣಕಲ್ ಬಾಯ್ಸ್’ ತಂಡದಿಂದ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಲಾಯಿತು. ಈ ತಂಡದಲ್ಲಿ ಸಿದ್ದೀಕ್, ಫರ್ಹನ್,ರಶೀದ್, ಅರಫಾತ್, ಅಝರ್, ನಯಾಜ್, ಆಫೀಲ್, ಸಿರಾಜ್, ಅರೀಫ್, ಸದ್ದು, ಅಕ್ಮಲ್, ಆಫನ್,ರಿಯಾಜ್ ಅದ್ದು, ಮುಖರಮ್, ಫಿದ್ದು, ಆತೀಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದ ಹಾಗೂ ನಿಧಾನವಾಗಿ ವಾಹನ ಚಲಾಯಿಸುವಂತೆ ಪ್ರಾಧಿಕಾರಗಳು ಮನವಿ ಮಾಡಿವೆ.
Series of accidents due to rain: Three cars overturn on the same road near Banakal