ಚಿಕ್ಕಮಗಳೂರು: ರಾಜ್ಯದ ವಿವಿಧ ಭಾಗಗಳ ಅಲ್ಲಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಕೋವಿಡ್ ವೈರಸ್ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಪತ್ತೆಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಕೋವಿಡ್ 19 ಕಾಣಿಸಿಕೊಂಡಾಗ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ಜಿಲ್ಲಾಡಳಿತ ಈ ಬಾರಿ ಆರಂಭದಲ್ಲೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜೊತೆಗೆ ಜಿಲ್ಲಾಸ್ಪತ್ರೆ, ತಾಲೂಕು, ಹೋಬಳಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗೋವಿಂದ್ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆ ಆರಂಭಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಅತಿಯಾದ ಜ್ವರ, ಶೀತ, ಉಸಿರಾಟದ ತೊಂದತೆಯಿಂದ ಬಳಲುತ್ತಿರುವವರ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಗುತ್ತಿದೆ.
ಜ್ವರ, ಶೀತದಿಂದ ಬಳಲುತ್ತಿರುವ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿಲ್ಲ. ಬದಲಿಗೆ ತೀವ್ರ ಜ್ವರ, ಶೀತ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ವಯಸ್ಸಾದವರು ಹಾಗೂ ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೋವಿಡ್ ಲಕ್ಷಣ ಕಂಡು ಬಂದಲ್ಲಿ ಅವರ ಕಫದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಕೋವಿಡ್ ಪರೀಕ್ಷೆಯ ವ್ಯವಸ್ಥೆ ಇಲ್ಲದಿರುವ ಕಾರಣದಿಂದಾಗಿ ರೋಗದ ಲಕ್ಷಣ ಹೊಂದಿರುವವರ ಮಾದರಿಗಳನ್ನು ಹಾಸನಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಪರೀಕ್ಷೆ ನಡೆಸಿ ವರದಿಯನ್ನು ಮರಳಿ ಕಾಫಿನಾಡಿಗೆ ಕಳುಹಿಸಲಾಗುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಸಕಲ ಸಿದ್ಧತೆ
ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಓ ಪಿ ಡಿ ಆರಂಭವಾದ ನಂತರ ಹಾಗೆಯೇ ಉಳಿದುಕೊಂಡಿದ್ದ ಹಳೆಯ ಎಮರ್ಜೆನ್ಸಿ ವಾರ್ಡ್ ಹಾಗೂ ಇತರೆ ವಾರ್ಡ್ಗಳನ್ನು ಕೋವಿಡ್ ರೋಗಿಗಳಿಗೆ ಸಂಬಂಧಿಸಿದಂತೆ ಮೀಸಲಿಟ್ಟುಕೊಳ್ಳಲು ನಿರ್ಧರಿಸಲಾಗಿದೆ. ಇದಲ್ಲದೆ ಪ್ರತ್ಯೇಕ ಐಸಿಯು ಘಟಕವನ್ನು ಕೋವಿಡ್ ಗಾಗಿಯೇ ಕಾಯ್ದಿರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಮೂಲಗಳು ತಿಳಿಸಿವೆ.
ಹಿಂದೆ ಕೋವಿಡ್ ಕಾಣಿಸಿಕೊಂಡ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿತ್ತು. ಸಂಪೂರ್ಣ ಕಣ್ಮರೆಯಾದ ಬಳಿಕ ಆಕ್ಸಿಜನ್ ಪ್ಲಾಂಟ್ ಬಳಕೆ ಅಷ್ಟಾಗಿ ಇಲ್ಲದಿದ್ದರೂ ಅದನ್ನು ಇದುವರೆಗೂ ಸುಸ್ಥಿತಿಯಲ್ಲಿಟ್ಟುಕೊಳ್ಳಲಾಗಿದೆ. ಕೋವಿಡ್ ಕಾಣಿಸಿಕೊಂಡರು ಇದೀಗ ಜಿಲ್ಲೆಯಲ್ಲಿ ಆಕ್ಸಿಜನ್ಗೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ.
ಕೋವಿಡ್ ಕಣ್ಮರೆಯಾದರೂ ಜಿಲ್ಲಾಸ್ಪತ್ರೆ ಆವರಣದಲ್ಲಿದ್ದ ಆಕ್ಸಿಜನ್ ಪ್ಲಾಂಟ್ ಅನ್ನು ಆಗಾಗ್ಗೆ ಆನ್ ಮಾಡುವ ಮೂಲಕ ಅದು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ.
ಈ ಹಿಂದೆ ಕೋವಿಡ್ ಮಹಾಮಾರಿ ಕಾಣಿಸಿಕೊಂಡಾಗ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕಾಫಿ ನಾಡಿನಲ್ಲಿ ಅಗತ್ಯ ಸಿಬ್ಬಂದಿಯ ಕೊರತೆ ಎದುರಾಗಿತ್ತು. ಆದರೆ ಇದೀಗ ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಗೊಂಡು ಕಾರ್ಯನಿರ್ವಹಿಸುತ್ತಿರುವುದರಿಂದ ಇಂದು ಯಾವುದೇ ಸಿಬ್ಬಂದಿ ಕೊರತೆ ಇಲ್ಲವಾಗಿದೆ.
ಒಂದು ವೇಳೆ ಕೋವಿಡ್ ಹೆಚ್ಚಾಗಿದ್ದೇ ಆದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ, ನರ್ಸಿಂಗ್ ವಿದ್ಯಾರ್ಥಿಗಳು ಲಭ್ಯರಿದ್ದಾರೆ. ಜೊತೆಗೆ ಜಿಲ್ಲಾಸ್ಪತ್ರೆ, ತಾಲೂಕು, ಹೋಬಳಿ ಆಸ್ಪತ್ರೆಗಳಲ್ಲಿಯೂ ಅಗತ್ಯ ಸಿಬ್ಬಂದಿ ಇರುವುದರಿಂದಾಗಿ ಈ ಬಾರಿ ಕೋವಿಡ್ ಕಾಣಿಸಿಕೊಂಡರೂ ಚಿಕಿತ್ಸೆ ನೀಡಲು ಯಾವುದೆ ಸಮಸ್ಯೆ ಇಲ್ಲದ ಸ್ಥಿತಿ ಜಿಲ್ಲೆಯಲ್ಲಿದೆ.
ಕೋವಿಡ್ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಬಹುದಾದ ಔಷಧಗಳು ಜಿಲ್ಲಾಸ್ಪತ್ರೆಗೆ ಬರಲಿವೆ. ಕೋವಿಡ್ ಗೆ ಸಂಬಂಧಿಸಿದಂತೆ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬ ತಿಳಿವಳಿಕೆ ಜನರಲ್ಲಿದೆ. ಹೀಗಾಗಿ ಕೋವಿಡ್ ನಿಯಂತ್ರಣ ಮಾಡುವುದು ಈ ಬಾರಿ ಅಷ್ಟಾಗಿ ಕಷ್ಟವಾಗುವುದಿಲ್ಲ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಬದಲಿಗೆ ಎಲ್ಲರೂ ಮುಂಜಾಗ್ರತಾ ಕ್ರಮ ಕೈಗೊಳ್ಳಿ. – ಡಾ.ಮೋಹನ್ ಕುಮಾರ್, ಜಿಲ್ಲಾ ಸರ್
ಚಿಕ್ಕಮಗಳೂರಿನ 22 ವರ್ಷ ವಯಸ್ಸಿನ ಯುವಕನಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ. ಯುವಕ ಆರೋಗ್ಯವಾಗಿದ್ದಾನೆ. ಆದರೆ ಮುಂಜಾಗ್ರತಾ ಕ್ರಮವಾಗಿ ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಂಬಂಧ ಈಗಾಗಲೇ ಸರ್ಕಾರದ ನಿರ್ದೇಶನದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಡಾ.ಆಶ್ವಥ್ ಬಾಬು, ಡಿಎಚ್ಒ ಚಿಕ್ಕಮಗಳೂರು
First Covid case detected in Coffee Country