ಚಿಕ್ಕಮಗಳೂರು: ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಿ ದತ್ತಾಂಶವನ್ನು (ಎಂಪೆರಿಕಲ್ ಡಾಟಾ) ಸಂಗ್ರಹಿಸಿ ಹೊಸದಾದ ಸಮೀಕ್ಷೆಯನ್ನು ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್‌ದಾಸ್ ಇವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಮೇ ೫ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಅದರಂತೆ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಯುತ್ತಿದ್ದು, ಇದೀಗ ಆ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಮಳೆ, ಹವಾಮಾನ ವೈಪರೀತ್ಯಗಳಿಂದಾಗಿ ಪರಿಶಿಷ್ಟ ಜಾತಿ, ಜನಾಂಗದ ಸಮೀಕ್ಷೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಂಡಿರುವುದಿಲ್ಲವೆಂಬ ಕಾರಣಕ್ಕಾಗಿ ಸಮೀಕ್ಷಾ ಅವಧಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ವಿಸ್ತರಿಸುವಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ವಿನಂತಿಸಿದ್ದಾರೆ.
ಜೊತೆಗೆ ಪರಿಶಿಷ್ಟ ಜಾತಿಯ ಜನರೆಲ್ಲರೂ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಅನುವಾಗುವಂತೆ ಈ ವಿಸ್ತರಣೆ ಮಾಡಲಾಗಿದ್ದು, ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ)ವನ್ನು ಜೂನ್ ೨ ರಿಂದ ಜೂ.೮ರವರೆಗೆ ವಿಸ್ತರಿಸಲಾಗಿದೆ ಮತ್ತು ಆನ್‌ಲೈನ್ ಮೂಲಕ ಸ್ವಯಂಘೋಷಣೆ ಜೂನ್ ೮ ರವರೆಗೆ ಮುಂದುವರೆಯಲಿದೆ.
ಅಲ್ಲದೆ, ಗಣತಿದಾರರು ರಜಾ ದಿನಗಳಲ್ಲಿಯೂ ಸಹ ಸಮೀಕ್ಷಾ ಬ್ಲಾಕ್‌ನ ವಿಶೇಷ ಶಿಬಿರಗಳಲ್ಲಿ ಕಾರ್ಯ ನಿರ್ವಹಿಸಿ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿರುವುದಾಗಿ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Comprehensive Survey of Scheduled Castes-Extension of Period