ಚಿಕ್ಕಮಗಳೂರು: ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಜೊತೆಗೆ ವಿಶೇಷ ಜ್ಞಾನವನ್ನು ಬಿತ್ತುವ ಕಾರ್ಯಕ್ರಮ ಅಕ್ಷರ ಅಭ್ಯಾಸ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಅವರು ಇಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆ ವತಿಯಿಂದ ಏರ್ಪಡಿಸಲಾಗಿದ್ದ ನರ್ಸರಿ, ಪ್ರೈಮರಿ, ಹೈಯರ್ ಪ್ರೈಮರಿ ಮತ್ತು ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಿಮ್ಮ ಮಗುವಿನ ಭದ್ರ ಬುನಾದಿಯ ಪ್ರಾರಂಭ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ ಎಂದು ಶ್ಲಾಘಿಸಿ ಜ್ಞಾನಕ್ಕೆ ಧರ್ಮ, ಜಾತಿ ಇಲ್ಲ, ನೀರು, ಗಾಳಿ, ಭೂಮಿ, ಆಕಾಶ, ಅಗ್ನಿ ಈ ಪಂಚಭೂತಗಳಿಗೂ ಧರ್ಮ-ಜಾತಿ ಇಲ್ಲ. ಅಕ್ಷರಕ್ಕೂ ಯಾವುದೇ ಜಾತಿ-ಧರ್ಮದ ಹಂಗು ಇಲ್ಲ, ಸಂಸ್ಕಾರ ಮತ್ತು ಸಂಸ್ಕೃತಿ ಮೂಲಕ ಹರಿಶಿಣ ಕೊಂಬಿನಿಂದ ಪೂರ್ವಿಕರು ಅಕ್ಷರಾಭ್ಯಾಸ ಮಾಡುತ್ತಾ ಬಂದಿರುವುದೇ ಮುಂದುವರೆದ ಈ ಅಕ್ಷರಭ್ಯಾಸ. ಮಕ್ಕಳಲ್ಲಿ ಒಳ್ಳೆಯ ಭಾವನೆ ಬೆಳೆಸಿ ಶಿಕ್ಷಣವಂತರಾದಾಗ ಪೋಷಕರ ಶ್ರಮ ಸಾರ್ಥಕ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ಕೊಟ್ಟಾಗ ಸಂಸ್ಕಾರ-ಸಂಸ್ಕೃತಿ ಬೆಳೆದು ಉತ್ತಮ ಸಮಾಜ ಕಟ್ಟುವ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಹರಿಶಿಣ ಕೊಂಬಿನಲ್ಲಿ ಓಂಕಾರ ಬರೆಸುತ್ತಿರುವುದು ಚೈತನ್ಯ ಪ್ರಣವ ಸ್ವರೂಪಿಯಾಗಿದೆ ಎಂದರು.
ಹರಿಶಿಣ ಭಗವಂತನ ಸೃಷ್ಟಿ, ಭೂಮಿಯಿಂದ ಬಂದ ಇದು ಅತ್ಯಂತ ಶ್ರೇಷ್ಠವಾಗಿದ್ದು, ಅದರ ಮೂಲಕ ಅಕ್ಷರಾಭ್ಯಾಸ ಮಾಡಿಸುತ್ತಿರುವುದು ವಿದ್ಯಾರ್ಥಿಗಳ ಮುಂದಿನ ಜೀವನ ಹಸನ್ಮುಖಿಯಾಗಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಇಂದು ನಡೆಸುತ್ತಿರುವ ಅಕ್ಷರಾಭ್ಯಾಸ ಮಕ್ಕಳ ಜೀವನದಲ್ಲಿ ಮರೆಯಲಾಗದ ಕ್ಷಣ. ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿ ವಿದ್ಯೆ, ಬುದ್ದಿ, ಸಂಸ್ಕಾರ, ಸಂಸ್ಕೃತಿ ಈ ನಾಡಿನ ಬಗ್ಗೆ ಗೌರವವನ್ನು ಬೆಳೆಸಲಿ ಎಂದು ಹಾರೈಸಿದರು.
ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಷ್ಟ್ರಕಟ್ಟುವ ಕೆಲಸಕ್ಕೆ ಮುಂದಾಗಲಿ, ಈ ಶಾಲೆಯಲ್ಲಿ ಉತ್ತಮವಾದ ಶಿಕ್ಷಕ ವೃಂದ ಇದ್ದು, ಜೊತೆಗೆ ತಾಯಂದಿರ ಪಾತ್ರ ಅತೀ ಮುಖ್ಯ ಎಂದು ಹೇಳಿದರು. ಹಿರಿಯರನ್ನು ಗೌರವಿಸುವುದನ್ನು ಪೋಷಕರು ಮಕ್ಕಳಲ್ಲಿ ಮನವರಿಕೆ ಮಾಡುವ ಜೊತೆಗೆ ವಿವಿಧತೆಯಲ್ಲಿ ಏಕತೆ-ಐಕ್ಯತೆಯನ್ನು ಹೊಂದಿರುವ ಭಾರತದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರು ಈ ದೇಶದ ಬೆನ್ನೆಲುಬು ಎಂದರು.
ಎಲ್ಲಾ ಧರ್ಮಗಳನ್ನು ಗೌರವಿಸುವಂತೆ ಜೆವಿಎಸ್ ಶಾಲೆಯನ್ನು ಜಿಲ್ಲಾ ಒಕ್ಕಲಿಗರ ಸಂಘ ನಡೆಸುತ್ತಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕೆ ಸೀಮಿತರಾಗದೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು, ದೈರ್ಯಶಾಲಿಗಳಾಗಿ ನಾಗಲೋಟದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ಎಲ್ಲಾ ರೀತಿಯ ಕೌಶಲ್ಯಗಳನ್ನು ಕಲಿಯುವುದು ಅಗತ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಎಸ್.ಎಸ್. ವೆಂಕಟೇಶ್ ಇದು ವಿಶಿಷ್ಟ, ವಿನೂತನ ಮಾದರಿಯಾದ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಜೆವಿಎಸ್ ಶಾಲೆ ನಡೆಸುತ್ತಾ ಬರುತ್ತಿದೆ ಎಂದರು. ಹಿಂದೆ ಗುರುಕುಲಗಳಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು, ನಂತರದ ದಿನಗಳಲ್ಲಿ ಆಧುನಿಕ ಶಿಕ್ಷಣವಾಗಿ ಮಾರ್ಪಟ್ಟಿತ್ತು. ಆದರೆ, ಸಂಸ್ಕೃತಿಯ ಮೂಲ ಬೇರು ಮರೆಯಬಾರದೆಂಬುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಹೇಳಿದರು.
ಶಿಕ್ಷಣ, ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು, ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು, ಅದರೊಟ್ಟಿಗೆ ಸಂಸ್ಕಾರವನ್ನೂ ಕಲಿಸಬೇಕು, ಈ ನಿಟ್ಟಿನಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದನ್ನು ಶ್ಲಾಘಿಸಿದರು. ವಿಜ್ಞಾನ ಎಷ್ಟೇ ಮುಂದುವರೆದರೂ ವಿಶ್ವದಲ್ಲಿ ಭಾರತದ ಸಂಸ್ಕೃತಿಗೆ ಅದರದೇ ಆದ ಅತೀ ದೊಡ್ಡ ಮಹತ್ವವಿದೆ, ಅದನ್ನು ಮರೆಯಬಾರದು. ಆ ಸಂಸ್ಕೃತಿ ಇದ್ದಾಗ ನಮ್ಮ ಮಕ್ಕಳು ಸಮರ್ಪಕವಾಗಿ ಅಭಿವೃದ್ಧಿ ಹೊಂದುತ್ತಾರೆಂದು ಅಭಿಪ್ರಾಯಿಸಿದರು.
ಸಂಸ್ಕೃತಿಯ ಬೇರು ಗಟ್ಟಿಯಾದಾಗ ಮಾತ್ರ ನಾಗರಿಕತೆ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳ ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತಿ ಬಿತ್ತಲು ಸಹಕಾರಿಯಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ. ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್. ಪ್ರದೀಪ್ ಕುಮಾರ್, ಸಹ ಕಾರ್ಯದರ್ಶಿ ರತೀಶ್ ಕುಮಾರ್, ನಿರ್ದೇಶಕರುಗಳಾದ ಬಿ.ಸಿ. ಲೋಕಪ್ಪಗೌಡ, ಹರಿಣಾಕ್ಷಿ ನಾಗರಾಜ್, ಪವಿತ್ರರತೀಶ್, ಪಿ.ರಾಜು, ಪ್ರಕಾಶ್, ಸಲಹಸಮಿತಿ ಸದಸ್ಯರಾದ ಹೆಚ್.ಜಿ. ಸುರೇಂದ್ರ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಚೇಂದ್ರ, ಸಿಇಓ ಕುಳ್ಳೇಗೌಡ, ಪ್ರಾಂಶುಪಾಲ ವಿಜಿತ್, ವ್ಯವಸ್ಥಾಪಕರಾದ ತೇಜಸ್ ಶಿಕ್ಷಕಿಯರಾದ ಪ್ರಮೀಳಾ ಲೀಲಾವತಿ ಉಪಸ್ಥಿತರಿದ್ದರು.ಮೊದಲಿಗೆ ಶಿಕ್ಷಕಿ ನಾಗವೇಣಿ ಸ್ವಾಗತಿಸಿ ರತೀಶ್ ಕುಮಾರ್ ವಂದಿಸಿದರು.
Literacy is the sowing of special knowledge along with culture.