ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ ಬೆಳೆಯಿಂದ ಹೊರಗಿಡುವ ಬಗ್ಗೆ ಚರ್ಚಿಸಲು ಸಭೆ ಕರೆದು ಆರ್ಥಿಕ ಸಚಿವಾಲಯಕ್ಕೆ ವಾಣಿಜ್ಯ ಸಚಿವಾಲಯ ಬೆಂಬಲಿಸಲು ಕೋರಬೇಕಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಅವರು ಇಂದು ನಗರಕ್ಕಾಗಮಿಸಿ ಎಐಟಿ ಸಭಾಂಗಣದಲ್ಲಿ ಕೆಜಿಎಫ್ ಮತ್ತು ಕಾಫಿ ಮಂಡಳಿಯಿಂದ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ
ಕಾಫಿ ಬೆಳೆಗಾರರಿಗೆ ಕೇವಲ ಸರ್ಫೇಸಿ ಕಾಯ್ದೆ ಜೊತೆಗೆ ವಾಣಿಜ್ಯ ತೆರಿಗೆಯಿಂದಲೂ ಸಮಸ್ಯೆಯಾಗಿದೆ. ಕೃಷಿ ವ್ಯಾಪ್ತಿಗೆ ಕಾಫಿಬೆಳೆ ಬರುವುದಿಲ್ಲ, ಕಾಫಿ ಭೂ ಕೃಷಿ ಆದರೂ ಈ ಬೆಳೆಯನ್ನು ಉದ್ಯಮವಾಗಿ ಘೋಷಣೆ ಮಾಡಿಕೊಂಡಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಕಾಫಿ, ರಬ್ಬರ್, ಮೆಣಸು ಈ ಬೆಳೆಗಳ ವ್ಯಾಪ್ತಿಗೂ ಸರ್ಫೇಸಿ ಕಾಯ್ದೆ ಅನ್ವಯವಾಗಲಿದ್ದು, ಇದಕ್ಕೆ ಪರಿಹಾರ ಸಿಗಬೇಕಾದರೆ ಸಮಗ್ರ ಕಾನೂನು ತಿದ್ದುಪಡಿ ಮಾಡುವುದೊಂದೇ ಮಾರ್ಗ ಎಂದು ಸ್ಪಷ್ಟಪಡಿಸಿದರು. ಈ ಎರಡೂ ಸಚಿವಾಲಯಗಳ ಗಮನ ಸೆಳೆದು ಪ್ರಸ್ತುತ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತಂದು ಕಾಫಿ, ರಬ್ಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಬೆಳೆಗಳನ್ನು ಇದರಿಂದ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸರ್ಫೇಸಿ ಕಾಯ್ದೆ ದೇಶದ ಕೆಲವು ಭಾಗದಲ್ಲಿ ಮಾತ್ರ ಜಾರಿಯಲ್ಲಿದ್ದು, ಉಳಿದಂತೆ ಎಲ್ಲೂ ಇಲ್ಲ. ಈ ಬಗ್ಗೆ ಚರ್ಚಿಸಲು ಕಾಫಿ ಮಂಡಳಿಯಲ್ಲಿ ಸಭೆ ಕರೆದರೆ ಸಂಬಂಧಪಟ್ಟ ಸಚಿವರು ಸಿಗುವುದಿಲ್ಲ ಎಂದು ಹೇಳಿದರು.
ಸರ್ಫೇಸಿ ಕಾಯ್ದೆ ಕಾಫಿ, ರಬ್ಬರ್, ಮೆಣಸು ಬೆಳೆಗಳ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿ ಸುತ್ತೋಲೆ ಹೊರಡಿಸಬೇಕೆಂದು ವಾಣಿಜ್ಯ ಸಚಿವರನ್ನು ಒತ್ತಾಯಿಸಲು ಸಂಸದರು ಒಗ್ಗಟ್ಟಿನಿಂದ ನಿರ್ಧರಿಸುವ ಅಗತ್ಯ ಇದೆ ಎಂದರು. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರೊಂದಿಗೆ ಬ್ಯಾಂಕರ್ಸ್ಗಳನ್ನು ಸೇರಿಸಿಕೊಂಡು ಸಭೆ ನಡೆಸಿ ಒನ್ ಟೈಮ್ ಸೆಟ್ಲ್ಮೆಂಟ್ನ್ನು ಮುಂದುವರೆಸಲು ಸಾಧ್ಯವಾಗುತ್ತಾ ಎಂಬ ಬಗ್ಗೆ ಹಾಗೂ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಮತ್ತು ಈಗಾಗಲೇ ಆನ್ಲೈನ್ ಮೂಲಕ ಹರಾಜು ಆಗಿರುವ ತೋಟಗಳನ್ನು ಬೆಳೆಗಾರರಿಗೆ ವಾಪಾಸ್ ಮಾಡಲು ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳೋಣ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಹರಾಜು ಮಾಡಿರುವ ತೋಟಗಳ ಬಗ್ಗೆ ಮರು ಪರಿಶೀಲಿಸಿ ಮುಂದೆ ಈ ರೀತಿ ಹರಾಜು ಆಗದಂತೆ ತಡೆಯುವ ಮಾನದಂಡಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ಕಾಫಿ ಬೆಳೆ ವಾಣಿಜ್ಯ ಬೆಳೆಯಾಗಿರುವುದನ್ನು ಬಿಟ್ಟರೆ ಕೃಷಿಯಾಗಿ ಕೆಲಸ ನಡೆಯುತ್ತಿದೆ. ಆದ್ದರಿಂದ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕೆಂದು ಆಗ್ರಹಿಸಿದರು.
ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೆಜಿಎಫ್ ಪದಾಧಿಕಾರಿಗಳು ಮತ್ತು ಬೆಳೆಗಾರರ ನಿಯೋಗ ಬರುತ್ತೇವೆ, ಅ ಸಂದರ್ಭದಲ್ಲಿ ನಮ್ಮೊಂದಿಗೆ ಸಂಸದರುಗಳಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೆಳೆಗಾರರ ಮರಣ ಶಾಸನವಾಗಿರುವ ಸರ್ಫೇಸಿ ಕಾಯ್ದೆ ಸಮಸ್ಯೆಗೆ ತಿಲಾಂಜಲಿ ನೀಡಬೇಕೆಂದು ಮನವಿ ಮಾಡಿದರು.
ಕೆಜಿಎಫ್ ಸದಸ್ಯ ರಘು ಮಾತನಾಡಿ, ಸಂಸದರು ಹಾಗೂ ಹಣಕಾಸು ಸಚಿವರು ಮಧ್ಯೆ ಪ್ರವೇಶಿಸಿ ಬ್ಯಾಂಕ್ಗಳಿಗೆ ಕಾಫಿ ಸಾಲಗಳನ್ನು ಸರ್ಫೇಸಿ ಕಾಯ್ದೆಯಿಂದ ವಿನಾಯ್ತಿ ನೀಡುವಂತೆ ಮನ ಒಲಿಸಬೇಕೆಂದು ವಿನಂತಿಸಿದರು.
ಬ್ಯಾಂಕರ್ಸ್ಗಳು ಕಾಫಿ ಬೆಳೆಗಾರರ ಬಗ್ಗೆ ಮೃದು ಧೋರಣೆ ತಾಳಬೇಕು, ಕೃಷಿ ಭೂಮಿಯಾಗಿರುವ ಕಾಫಿತೋಟಗಳನ್ನು ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹರಾಜು ಹಾಕುತ್ತಿರುವುದನ್ನು ಸಂಸದರಾದ ತಾವು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಜಯರಾಂ, ಟಿ.ರಾಜಶೇಖರ್, ರತೀಶ್, ಕೆ.ಡಿ ಮನೋಹರ್, ಐ.ಎಂ. ಮಹೇಶ್, ಲಿಂಗಪ್ಪ ಗೌಡ, ನಾಗೇಶ್, ರೇವಣ್ಣ ಗೌಡ, ಯತೀಶ್, ಶ್ರೇಯಸ್, ಮಹೇಶ್, ಎಐಟಿ ರಿಜಿಸ್ಟ್ರಾರ್ ಸಿ.ಕೆ. ಸುಬ್ರಾಯ, ಪ್ರಾಂಶುಪಾಲರಾದ ಜಯದೇವ, ಕೆ.ಕೆ. ರಘು, ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Discussion on SARFAESI Act in Parliament session