ALSO FEATURED IN

ಕವಿತೆಗಳು ಅನುಭವ ಶೋಧಕ್ಕೆ ದಾರಿ ತೆರೆಯುತ್ತವೆ

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ ಹೋಗುತ್ತವೆ ಎಂದು ಹಿರಿಯ ಪತ್ರಕರ್ತ, ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಸ.ಗಿರಿಜಾಶಂಕರ ವಿಶ್ಲೇಷಿಸಿದರು.

ನಗರದ ಸುಭಾಶ್ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸ್ಕೌಟ್ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಸಂಜೆ ವೈಲ್ಡ್‌ಕ್ಯಾಟ್-ಸಿ ಸಕ್ರಿಯ ಕಾರ್ಯಕರ್ತ, ಕವಿ ಝೈದ್‌ಖಾನ್ ವಿರಚಿತ `ಗ್ರಾಸ್‌ರೂಟ್ಸ್ ಟು ಗ್ಯಾಲಕ್ಸಿ’ ಆಂಗ್ಲ ಕವನ ಗುಚ್ಛ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ಎಂದೂ ತನಗೋಸ್ಕರ ಕವಿತೆ ಬರೆಯುವುದಿಲ್ಲ. ಅವನು ತನ್ನ ತಾಕಲಾಟಗಳನ್ನು, ಜೀವನದ ಗೊಂದಲಗಳನ್ನು, ಸಂತೋಷಗಳನ್ನು ಕವನದ ಮೂಲಕ ನಮ್ಮ ಮುಂದಿಡುತ್ತಾನೆ. ಅದಕ್ಕೆ ಬೇಂದ್ರೆ ಹೀಗೆ ಹೇಳುತ್ತಾರೆ… `ಎನಪಾಡು ಎನಗಿರಲಿ; ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ, ಕಲ್ಲು ಸಕ್ಕರೆಯಂಥ ನಿನ್ನ ಹೃದಯ ಕರಗಿದರೆ ಆ ಸವಿಯನಿಷ್ಟು ಹನಿಸು ನನಗೆ’. ಒಬ್ಬ ಸಹೃದಯಿಯಿಂದ ಕವಿ ಬಯಸುವುದು ಇಷ್ಟನ್ನು ಮಾತ್ರ ಎಂದರು.

ಒಂದು ಪುಸ್ತಕ ನೈಜವಾಗಿ ಬಿಡುಗಡೆಯಾಗುವುದು ಅದನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸಹೃದಯಿ ಸಿಕ್ಕಾಗ. `ನನ್ನ ಮುಖೋದ್ಗತ ಹೃದ್ಗತವಾದ ದಿನ ಸುದಿನ. ಅಲ್ಲಿಯವರೆಗೂ ಅದು ತಕ್ಕಮಣ್ಣಿನ ತೇವಕ್ಕಾಗಿ ಕಾದೇ ಇರುವ ಬೀಜ’ ಎಂದು ಕವಿ ಗಂಗಾಧರ ಚಿತ್ತಾಲರು ಹೇಳಿದ್ದಾರೆ. ಕವಿಯ ಮನಸ್ಸಿನಲ್ಲಿ ಮೂಡಿದ್ದನ್ನು ಕೃತಿಗಿಳಿಸಿದಾಗ ಒಬ್ಬ ಸಹೃದಯಿ ಓದಿ ಸಂತಸಪಡುತ್ತಾನಲ್ಲ, ಅಂದು ಕವಿಗೆ ತನ್ನ ಕೃತಿ ಬಿಡುಗಡೆಯಾದ ಸುದಿನವೆನಿಸುತ್ತದೆ ಎಂಬುದು ಇದರರ್ಥ ಎಂದು ಹೇಳಿದರು.

ಝೈದ್ ಅವರ ಎರಡನೇಯ ಕವನ ಸಂಕಲನ ಇದು. ತಾವು ಕಾನನದಲ್ಲಿ ಕಂಡ ದೃಶ್ಯಗಳನ್ನು ಗಮನಿಸಿ ಅವುಗಳಿಗೆ ಕವನದ ಸ್ಪರ್ಶವನ್ನು ನೀಡಿ ಅವುಗಳನ್ನು ಬದುಕಿಗೆ ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಅಂಥ ದೃಶ್ಯಗಳನ್ನು ಗಮನಿಸಿದಾಗ ಝೈದ್ ಅವರಲ್ಲಿರುವ ಕವಿ ಎಚ್ಚೆತ್ತುಕೊಳ್ಳುತ್ತಾನೆ. ಇದೀಗ ಬಿಡುಗಡೆಯಾಗಿರುವ ಕವನ ಸಂಕಲನದಲ್ಲಿ ಪ್ರಾಣಿ. ಪಕ್ಷಿಗಳ ಚಹರೆ, ಚಲನವಲನವನ್ನು, ಪ್ರಕೃತಿಯ ರಮಣೀಯ ಪರಿಸರವನ್ನು ಝೈದ್ ಬಿಂಬಿಸಿದ್ದಾರೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸದೆ ಇನ್ನು ಮುಂದಕ್ಕೆ ಕ್ರಮಿಸಿ, ಬಾಹ್ಯಾಕಾಶ, ಬೇರೆ ಬೇರೆ ವಸ್ತುಗಳು, ಸ್ನೇಹಿತರ ಬಗ್ಗೆ ಸಹ ತಮ್ಮ ಕವಿತೆಗೆ ವಿಷಯಗಳನ್ನೆತ್ತಿಕೊಂಡಿದ್ದಾರೆ. ಅವರಿಂದ ರಚಿತವಾದ ೪೨ ಅತ್ಯುತ್ತಮ ಪದಪುಂಜಗಳಿರುವ ಕವನಗಳನ್ನು ಈ ಕೃತಿ ಒಳಗೊಂಡಿದೆ. ಕವನಗಳನ್ನು ಗಮನಿಸಿದಾಗ ಅವರಿಗೆ ಆಂಗ್ಲ ಭಾಷೆಯಲ್ಲಿರುವ ಪ್ರೌಢಿಮೆ ಅರ್ಥವಾಗುತ್ತದೆಯಲ್ಲದೆ, ಈ ಕವನ ಸಂಕಲನದಲ್ಲಿ ಅನಾವರಣಗೊಂಡಿದೆ ಎಂದರು.

ಕೃತಿಕರ್ತೃ ಝೈದ್ ಖಾನ್ ಮಾತನಾಡಿ, ನನಗೆ ತಂದೆ, ತಾಯಿ, ಸ್ನೇಹಿತರು ನೀಡಿದ ಸ್ಫೂರ್ತಿಯಿಂದಾಗಿ ನಾನು ಇವತ್ತು ಪ್ರಕೃತಿ ಪ್ರೀತಿ, ವನ್ಯಜೀವಿ ಸಂರಕ್ಷಣೆ ಕುರಿತಾದ ಕವನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ತಂದಿದ್ದು, ಈ ಹೆಮ್ಮೆಯ ಕ್ಷಣ ಅಪೂರ್ವ ಆನಂದ ಅನುಭೂತಿ ನೀಡಿದೆ. ಕುಟುಂಬದವರ ಪೆತ್ಸಾಹ, ಶಿಕ್ಷಕರು, ಸ್ನೇಹಿತರು, ಸಾಹಿತ್ಯ ಮತ್ತು ಪ್ರಕೃತಿ ಪ್ರಿಯರು ಇವರುಗಳ ಸಹಕಾರ ಇಲ್ಲದೆ ಹೋಗಿದ್ದರೆ ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಮೈಸೂರಿನಿಂದ ಚಿಕ್ಕಮಗಳೂರಿಗೆ ಪ್ರತೀ ಸಲ ಬಂದಾಗ ಅರ್ಧ ದಿನ ಮಾತ್ರ ಮನೆಯಲ್ಲಿದ್ದು, ಇನ್ನರ್ಧ ದಿನ ಕಾಡಿನಲ್ಲೇ ಕಾಲ ಕಳೆಯುತ್ತಿದ್ದೆ. ಶಾಲಾ ದಿವಸಗಳಲ್ಲಿಯೇ ರಸಪ್ರಶ್ನೆ, ಲೇಖನಗಳನ್ನು ಸಿದ್ಧಪಡಿಸುವ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದೆ ಎಂದು ಹೇಳಿದರು.

ಒಮ್ಮೆ ಅರಣ್ಯ ಪ್ರವಾಸ ಕೈಗೊಂಡಾಗ ಡಿ.ವಿ.ಗಿರೀಶ್ ಮತ್ತು ವೈಲ್ಡ್‌ಕ್ಯಾಟ್-ಸಿ ಸಂಪರ್ಕದಿಂದಾಗಿ ಹಳೆಯ ನೆನಪುಗಳು ಮರುಕಳಿಸಿ ಈಗ ಕೃತಿರೂಪಕ್ಕಿಳಿಸಿದ್ದೇನೆ. ಗಿರೀಶ್ ಪ್ರೇರಣೆಯಿಂದ ಈ ಪುಸ್ತಕ ರಚಿಸಲು ಸಾಧ್ಯವಾಗಿದ್ದು, ಇದನ್ನು ಅವರಿಗೇ ಅರ್ಪಿಸಿದ್ದೇನೆ. ಗಿರೀಶ್ ನನಗೆ ಪಿತೃಸಮಾನರಾಗಿ ಕಾಡಿನ ರಹಸ್ಯಗಳಲ್ಲದೆ, ಜೀವನ ಮೌಲ್ಯಗಳನ್ನೂ ಬೋಧಿಸಿದವರು. ಒಮ್ಮೆ ಗರುಡನಗಿರಿಗೆ ಚಾರಣಕ್ಕೆ ಹೋದ ಸಂದರ್ಭದಲ್ಲಿ ಹಿತೈಷಿಯೊಬ್ಬರು ನೀಡಿದ ಪ್ರೋತ್ಸಾಹದಿಂದ ಕವನ ಹುಟ್ಟಲು ಕಾರಣವಾಯಿತು ಎಂದು ನೆನಪಿಸಿಕೊಂಡರು.

ಕಳೆದ ವರ್ಷ ವೈಲ್ಡ್‌ಕ್ಯಾಟ್-ಸಿ.ಯಿಂದ ಮುಂಗಾರು ಶಿಬಿರ ಏರ್ಪಡಿಸಲಾಗಿತ್ತು. ಅಲ್ಲಿ ಕವನವೊಂದು ನನ್ನಲ್ಲಿ ಹುಟ್ಟಲು ಕಾರಣವಾಯಿತು. ಅನಂತರದಲ್ಲಿ ರೂಪುಗೊಂಡ ಆ ಕವನ ಸಂಕಲನದ ಹೆಸರು `ಗ್ರೀನ್ ಥ್ರೆಡ್ಸ್’. ಆ ಪುಸ್ತಕದ ಮೊದಲ ಕವನದ ಸಾಲು ಜಗತ್ತು ವಾರಾಂತ್ಯದಲ್ಲಿ ಗಾಢ ನಿದ್ರೆಯಲ್ಲಿದ್ದಾಗ, ಏಕಾಂತದಲ್ಲಿ ಪ್ರಕೃತಿಯ ಸಹಚರ್ಯ ನನ್ನಲ್ಲಿ ಹೊಸ ಭರವಸೆ, ಪ್ರಕೃತಿಯ ಪ್ರೀತಿ ಹುಟ್ಟು ಹಾಕಿತು. ನಾಳೆಯ ಅಭ್ಯುದಯಕ್ಕೆ ಪ್ರಕೃತಿಯೇ ಸೆಲೆ. ವೈಲ್ಡ್‌ಕ್ಯಾಟ್-ಸಿ. ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ನಾವು ನೋಡುವ ಪ್ರಾಣಿ, ಪಕ್ಷಿ, ಕಾಡು, ಗುಡ್ಡ ಸಂತೋಷವುಂಟು ಮಾಡುವ ಮನಸ್ಥಿತಿ ಬೆಳೆಯಿತು. ಈ ಕಾರಣದಿಂದಲೇ ಈ ಪುಸ್ತಕ ಹೊರ ಬಂದಿದೆ. ವೈಲ್ಡ್ ಕ್ಯಾಟ್-ಸಿ ಗೆಳೆಯರ ನೆರವನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದರು.

ಸ್ವಾಗತಿಸಿದ ವೈಲ್ಡ್‌ಕ್ಯಾಟ್-ಸಿ.ಯ ಮುಖ್ಯಸ್ಥ ಶ್ರೀದೇವ್ ಹುಲಿಕೆರೆ ಮಾತನಾಡಿ, ಧನಾತ್ಮಕ ಚಿಂತನೆ ಹೊಂದಿರುವ ಝೈದ್ ಉತ್ಸಾಹದ ಚಿಲುಮೆಯಂತಿರುವ ಯುವಕ. ರಸಪ್ರಶ್ನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ. ಹಾಗೆಯೇ ಪ್ರಾಣಿ, ಪಕ್ಷಿ ಕಾಡು, ಗುಡ್ಡ ಉಳಿಸುವ ಮನೋಭಾವ ಬೆಳೆಸಿತು. ಪ್ರಕೃತಿ, ಪರಿಸರ ಉಳಿಸಲು ತುಂಬಾ ಕೆಲಸ ಮಾಡಿರುವ ವೈಲ್ಡ್‌ಕ್ಯಾಟ್-ಸಿ. ಈ ಬಗೆಗಿನ ವಿಚಾರಗಳನ್ನು ಬರವಣಿಗೆಗಿಳಿಸದ ಕೊರತೆಯಿತ್ತು. ಅದನ್ನು ಝೈದ್ ಸಾಕಾರಗೊಳಿಸಿದ್ದಾರೆ ಎಂದರು.

ಝೈದ್ ಖಾನ್ ಅವರ ಅಜ್ಜಿ ಫಾಹ್ಮಿದಾ ಖಾನ್ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಮುಖ್ಯಸ್ಥ ಡಿ.ವಿ.ಗಿರೀಶ್ ವಂದಿಸಿದರು. ಪರಿಸರಾಸಕ್ತ ಮನೀಶ್‌ಕುಮಾರ್ ಕಾರ್ಯಕ್ರಮದಲ್ಲಿದ್ದರು.

Poems open the way to the discovery of experience.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

[t4b-ticker]
Exit mobile version