ಚಿಕ್ಕಮಗಳೂರು: ವಿವಿಧ ವಸತಿ ಯೋಜನೆಗಳಡಿ ನಿವೇಶನ, ಮನೆ ನೀಡುವಂತೆ ಒತ್ತಾಯಿಸಿ ಇಂದು ಬಿಜೆಪಿ ನಗರ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಿಂದ ಹೊರಟ ನೂರಾರು ಕಾರ್ಯಕರ್ತರು ನಗರಸಭೆ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ಮನೆಗಳನ್ನು ವಿತರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಆಶ್ರಯ, ಅಂಬೇಡ್ಕರ್ ಅವಾಜ್ ಯೋಜನೆ, ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿಯಲ್ಲಿ ಮನೆಗಳನ್ನು ಮಂಜೂರು ಮಾಡುವ ಜೊತೆಗೆ ಅದಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗಳ ಹಣ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ೪೬ ಸಾವಿರಕ್ಕೂ ಅಧಿಕ ಅರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸಿರುವ ಕ್ರಮವನ್ನು ಖಂಡಿಸಿದ ಅವರು, ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
೯೪-ಸಿ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಬಾರದು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ.
೭೦ ವರ್ಷ ಮೇಲ್ಪಟ್ಟ ಎಲ್ಲಾ ವರ್ಗದವರಿಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ ಜಾರಿಗೊಳಿಸಿದ್ದರೂ ಕರ್ನಾಟಕದಲ್ಲಿ ಅನುಷ್ಠಾನಗೊಳಿಸದಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ತಕ್ಷಣವೇ ಅನುಷ್ಠಾನಕ್ಕೆ ಕ್ರಮ ಜರುಗಿಸಬೇಕು. ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿ ಕೌಶಿಕ್, ಮಾಜಿ ನಗರಸಭಾಧ್ಯಕ್ಷರಾದ ಸುಜಾತ ಶಿವಕುಮಾರ್, ಮುತ್ತಯ್ಯ, ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ದೀಪಾ ರವಿಕುಮಾರ್, ಅಮೃತೇಶ್, ರೂಪಾ ಕುಮಾರ್, ಲಲಿತಾಬಾಯಿ, ರಾಜು, ಮಂಜುನಾಥ್ ಮತ್ತು ಬಿಜೆಪಿ ಮುಖಂಡರಾದ ಸಂತೋಷ್ ಕೋಟ್ಯಾನ್, ಕನಕರಾಜ್ ಅರಸ್, ಮಂಜುನಾಥ್, ಜೆಸೆಂತಾ ಅನಿಲ್‌ಕುಮಾರ್, ಕೆ.ಪಿ. ವೆಂಕಟೇಶ್, ವಕ್ತಾರ ಹೆಚ್.ಎಸ್. ಪುಟ್ಟಸ್ವಾಮಿ ಮತ್ತಿತರರು ಭಾಗವಹಿಸಿದ್ದರು
BJP Nagar Mandal protests demanding fulfillment of various demands