ಚಿಕ್ಕಮಗಳೂರು: ಶತಮಾನದ ಹಿಂದೆ ಯೋಗ ಸಾಧನೆ ಮಾಡಿದ ಪ್ರಭುಕುಮಾರ ಪಟ್ಟಾಧ್ಯಕ್ಷರು ಉತ್ತರಭಾರತದಲ್ಲೂ ಗಮನಸೆಳೆದು ಯೋಗಿರಾಜ ಬಿರುದಿಗೆ ಪಾತ್ರರಾದವರೆಂದು ಹಾರನಹಳ್ಳಿ ಕೋಡಿಮಠದ ಶ್ರೀಡಾ.ಶಿವಾನಂದ ಶಿವಯೋಗಿರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಿಸಿದರು.
ಗಿರಿಯಾಪುರದ ಶ್ರೀಗುರು ಕುಮಾರಾಶ್ರಮ ಮತ್ತು ವೀರಶೈವ ತತ್ತ್ವಪ್ರಚಾರ ಕೇಂದ್ರದ ನೇತೃತ್ವದಲ್ಲಿ ಶ್ರೀಮಲ್ಲಿಕಾಂಭ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಲಿಂ.ಪ್ರಭುಕುಮಾರ ಪಟ್ಟಾಧ್ಯಕ್ಷರ ೯೨ನೆಯ ಸ್ಮರಣಾರಾಧನೆಯ ದಿವ್ಯಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಕೈಕಾಲು ತಿರುವೋದು ಯೋಗವಲ್ಲ. ಯೋಗ ಎಂದರೆ ಕೂಡಿಕೆ. ಶಿವನಲ್ಲಿ ಒಂದಾಗುವುದು ಯೋಗ. ಅಂತಹ ಯೋಗವನ್ನು ಅಭ್ಯಾಸ ಮಾಡಿ ಅಲಹಾಬಾದ್‌ನಲ್ಲಿ ಕುಂಭಮೇಳ ನಡೆದ ಸಂದರ್ಭದಲ್ಲಿ ಯೋಗಪ್ರದರ್ಶನ ಮಾಡಿ ಉತ್ತರ ಭಾರತೀಯರಿಂದಲೂ ಪ್ರಶಂಸೆಗೆ ಒಳಗಾದ ಪ್ರಭುಕುಮಾರರು ಅಲ್ಲಿ ಯೋಗಿರಾಜರೆಂಬ ಬಿರುದನ್ನು ಪಡೆದ ಕನ್ನಡಿಗರೆಂದು ಬಣ್ಣಿಸಿದರು.
ಕೆ.ಬಿದರೆಮಠದ ಪಟ್ಟಾಧ್ಯಕ್ಷರಾಗಿದ್ದ ಪ್ರಭುಕುಮಾರರು ಶಿವಯೋಗಮಂದಿರದಲ್ಲೆ ಹೆಚ್ಚು ಸಮಯ ಅಲ್ಲಿಯ ವಟುಗಳಿಗೆ ಯೋಗಾಭ್ಯಾಸ ಮಾಡಿಸುವಲ್ಲಿ ವ್ಯಯಿಸಿದರು. ಬಿದರೆಯಲ್ಲಿ ಕೆಲಕಾಲ ಮಾತ್ರ ಇರುತ್ತಿದ್ದರು. ಕೋಡಿಮಠದಲ್ಲೂ ಕೆಲವರ್ಷ ಪೂಜೆ ಅನುಷ್ಠಾನಾದಿಗಳನ್ನು ನಿರ್ವಹಿಸಿದವರು.
ಗಿರಿಯಾಪುರದಲ್ಲಿ ಸಮಾಧಿ ಹೊಂದಬೇಕೆಂದು ಅಪೇಕ್ಷಿಸಿ ಕೊನೆಗಾಲದಲ್ಲಿ ಇಲ್ಲೆ ಅನುಷ್ಠಾನ ಮಾಡಿ ಜನರಿಗೆ ಸಂಸ್ಕಾರ ಕಲಿಸಿದವರೆಂದು ನುಡಿದರು.
ಶಿವಯೋಗ ಮಂದಿರದಲ್ಲಿ ಸಂಸ್ಥಾಪಕರಾದ ಹಾನಗಲ್ ಕುಮಾರಶಿವಯೋಗಿಗಳಿಗೆ ಒತ್ತಾಸೆಯಾಗಿದ್ದು ಅವರ ಏಳುಸಾಧಕ ಶಿಷ್ಯರಲ್ಲಿ ಮೊದಲಿಗರಾದ ಪ್ರಭುಕುಮಾರರು ನೀರಿನಮೇಲೆ ಲೀಲಾಜಾಲವಾಗಿ ನಡೆಯುವುದು ಸೇರಿದಂತೆ ಅನೇಕ ಸಾಧನೆಯನ್ನು ಯೋಗದ ಮೂಲಕ ಆಗುಮಾಡಿದವರು. ಪರಕಾಲ ಪ್ರವೇಶ ಇವರಿಗೆ ಸಿದ್ಧಿಸಿತ್ತು ಎಂದ ಕೋಡಿಮಠಾಧ್ಯಕ್ಷರು, ಪ್ರಭುಕುಮಾರರ ಸಾಧನೆಯ ಬಗ್ಗೆ ಅರಿವು ಜಗತ್ತಿಗೆ ಇಲ್ಲದಿರುವುದು ವಿಷಾದನೀಯ ಎಂದರು.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಶ್ರೀಗುರುಸಿದ್ದರಾಜೇಂದ್ರ ಯೋಗೇಂದ್ರ ಮಹಾಸ್ವಾಮಿಗಳು ಮಾತನಾಡಿ ಯೋಗವಿದ್ಯಾ ಪಾರಂಗತರಾಗಿದ್ದ ಪ್ರಭುಕುಮಾರ ಪಟ್ಟಾಧ್ಯಕ್ಷರು ಈ ನೆಲದಲ್ಲಿ ಓಡಾಡಿದವರೆಂಬುದು ಅಭಿಮಾನದ ಸಂಗತಿ. ಯೋಗವಷ್ಟೇ ಅಲ್ಲ. ಅನೇಕ ಕ್ಷೇತ್ರಗಳಲ್ಲೂ ಸಾಧನೆ ಮಾಡಿದವರು. ಶಿವಾಚಾರ್ಯರನ್ನು ತರಬೇತಿಗೊಳಿಸುವ ಬಾದಾಮಿಯ ಶಿವಯೋಗಿಮಂದಿರ ನಿರ್ಮಾಣ-ನಿರ್ವಹಣೆಗೆ ಶ್ರಮವಹಿಸಿದವರೆಂದರು.
ಆನಂದಪುರಂ ಮುರುಘಾಮಠಾಧ್ಯಕ್ಷ ಡಾ.ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಅಂತರಂಗದ ಸಾಧನೆಯನ್ನು ಶಿವಯೋಗವೆಂದರೆ, ಬಹಿರಂಗ ಸಾಧನೆಯನ್ನು ಯೋಗವೆನ್ನಲಾಗುತ್ತಿದೆ. ಆತ್ಮಕ್ಕೆ ಸಂಸ್ಕಾರ ನೀಡುವುದೇ ಶಿವಯೋಗ. ಶರೀರ ಸದೃಢಗೊಳಿಸುವುದು ಯೋಗ. ಆಧುನಿಕ ಮನುಷ್ಯನ ದುರಂತದ ಧಾವಂತದ ಬದುಕು ಯೋಗದ ಪ್ರಾಮುಖ್ಯತೆಯನ್ನು ತೆರೆದಿಡುವಂತೆ ಮಾಡಿದೆ. ದೇಹಕ್ಕೆ ಪಂಚೇಂದ್ರಿಯಗಳು ಅತ್ಯಗತ್ಯ. ಆದರೆ ಅವು ಸಮನಾಗಿಲ್ಲ. ಪಂಚೇಂದ್ರಿಯಗಳ ಕ್ರೋಢೀಕರಣವೇ ಯೋಗ. ಇಂತಹ ಶಿವಯೋಗ ಸಾಧನೆ ಮಾಡಿದವರು ಪ್ರಭುಕುಮಾರರು ಎಂದರು.
ವಾಸ್ತವವಾಗಿ ಯೋಗಕ್ಕೆ ಮೊದಲು ಪ್ರಾಮುಖ್ಯತೆ ತಂದುಕೊಟ್ಟವರೆ ಪ್ರಭುಕುಮಾರರು. ಅದಕ್ಕೆ ಪ್ರೇರಕರು ಕುಮಾರಶಿವಯೋಗಿಗಳು. ೬೩ಆಸನಗಳನ್ನು ಪಟ್ಟಿಮಾಡಿ ಕಲಿಸುತ್ತಿದ್ದರು. ಯೋಗ ಕಲಿಕೆಯ ಸಿಲಬಸ್‌ನ್ನು ಮೊಟ್ಟಮೊದಲು ತಯಾರಿಸಿದವರು. ಶಿವಯೋಗಮಂದಿರದ ವಟುಗಳಿಗೆ ಕಲಿಸುತ್ತಿದ್ದು ಅವರು ವಿವಿಧ ಮಠಗಳಿಗೆ ಶಿವಾಚಾರ್ಯರರಾಗಿ ತೆರಳಿ ಅಲ್ಲೆಲ್ಲ ಯೋಗವನ್ನು ಪಸರಿಸಿದರು. ಮೂಲಪುರುಷರೆನ್ನಬಹುದಾದ ಪ್ರಭುಕುಮಾರರ ಕಾರ್‍ಯಸಾಧನೆಯ ಬಗ್ಗೆ ಸಮಾಜ-ಸರ್ಕಾರ ಅರಿತುಕೊಂಡಿದ್ದರೆ ಅಂತರರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಇರುತ್ತಿತ್ತು ಎಂದು ಆನಂದಪುರಂ ಶ್ರೀಗಳು ನುಡಿದರು.
ಸಾಹಿತಿ ಜಾನಪದತಜ್ಞ ಗೊ.ರು.ಚನ್ನಬಸಪ್ಪ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ಯೋಗವಿದ್ಯೆ ಅದ್ಭುತ ಸಾಧನೆ ಮಾಡಿದ ಪವಿತ್ರಾತ್ಮರು ಪ್ರಭುಕುಮಾರರು. ಯೋಗಕ್ಕೆ ಜಾತಿ-ಮತ-ಧರ್ಮ-ಅಂತಸ್ತು-ವಯಸ್ಸು-ದೇಶ-ಕಾಲಗಳ ಮಿತಿ ಇಲ್ಲ ಎಂದು ಸಾರಿದವರು. ಎಲ್ಲರೂ ಸುಲಭವಾಗಿ ಸಾಧಿಸುವ ಯೋಗಮಾರ್ಗ ಪರಿಚಯಿಸಿದವರು. ಕೆ.ಬಿದರೆ-ಗಿರಿಯಾಪುರ ಸುತ್ತಮುತ್ತಲಿನ ಜನತೆಗೆ ಯೋಗದ ಜೊತೆಗೆ ಶಿವಜ್ಞಾನದ ಸಂಸ್ಕಾರವನ್ನೂ ನೀಡಿದವರು.
ಯೋಗ ಕೆಲವರ ಸ್ವತ್ತಾಗಿದಂತಿತ್ತು. ಮೋದಿ ಪ್ರಧಾನಿಯಾದ ಮೇಲೆ ವಿಶ್ವಕ್ಕೆ ಯೋಗ ಪರಿಚಯಿಸಿ ಘನತೆ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ನಮ್ಮ ದೇಹರಚನೆ ಯಂತ್ರ-ಮಂತ್ರ-ತಂತ್ರಗಳ ಸಂಯೋಜನೆ. ಈ ಮೂರನ್ನೂ ಬಳಸಿಕೊಂಡು ಯೋಗ ಸಾಧನೆ ಮಾಡಬೇಕು. ಯೋಗದಿಂದ ಮನಃಶಾಂತಿ ಪಡೆಯಬಹುದು. ಮನಸ್ಸು-ದೇಹ ಮತ್ತು ಆತ್ಮ ಮೂರನ್ನೂ ಹದಗೊಳಿಸುವ ಯೋಗವಿದ್ಯೆ ಪ್ರಭುಕುಮಾರರಿಗೆ ಸಿದ್ಧಿಸಿತ್ತು ಎಂದರು.
ಗೋಣಿಬೀಡು ಮಠದ ಶ್ರೀಡಾ.ಸಿದ್ದಲಿಂಗಮಹಾಸ್ವಾಮಿಗಳು, ಬೀರೂರುಮಠದ ಶ್ರೀರುದ್ರಮುನಿಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಕೆ.ಬಿದರೆ ಮಠಾಧ್ಯಕ್ಷ ಶ್ರೀಪ್ರಭುಕುಮಾರ ಶಿವಾಚಾರ್ಯರು, ಹೊಸಹಳ್ಳಿ ಯಳನಾಡುಸಂಸ್ಥಾನಮಠದ ಶ್ರೀಜ್ಞಾನಪ್ರಭು ದೇಶಿಕೇಂದ್ರರ ಮಹಾಸ್ವಾಮಿಗಳು ಮಾತನಾಡಿದರು. ಅಂಬರದೇವರಮಠದ ಶ್ರೀಉಜ್ಜನೇಶ್ವರ ಶಿವಾಚಾರ್ಯರು, ಕೋಡಿಮಠದ ಕಿರಿಯಶ್ರೀಗಳಾದ ಚೇತನಮರಿದೇವರು ವೇದಿಕೆಯಲ್ಲಿದ್ದರು.
ನಾಡೋಜ ಪುರಸ್ಕೃತ ಗೊ.ರು.ಚ., ಅರಸೀಕೆರೆಯ ಆರ್ಥೋತಜ್ಞ ಡಾ.ಮಧು, ಗಿರಿಯಾಪುರದ ದಾನಿ ತೋಂಟದಾರ್ಯ, ಕಾರ್‍ಯದರ್ಶಿ ಜಿ.ಸಿ.ಗುರುಶಾಂತಪ್ಪ, ಚಿಕ್ಕಮಗಳೂರಿನ ಮಾ.ಸಂ.ಪ್ರ. ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಅವರುಗಳಿಗೆ ಇದೇ ಸಂದರ್ಭದಲ್ಲಿ ಕೋಡಿಮಠಾಧ್ಯಕ್ಷರು ಗುರುರಕ್ಷೆ ನೀಡಿದರು. ಶಿವಾದ್ವೈತ ತತ್ತ್ವಪ್ರಚಾರಕೇಂದ್ರದ ಕಾರ್‍ಯಾಧ್ಯಕ್ಷ ಜಿ.ಸಿ.ಶಿವಲಿಂಗಪ್ಪ ಪ್ರಾಸ್ತಾವಿಸಿದ್ದು, ಜಿ.ಎಂ.ಎನ್.ಸ್ವಾಮಿ ಸ್ವಾಗತಿಸಿ, ಶಿವಕುಮಾರ ವಂದಿಸಿದರು.
Remembrance service led by the headmaster of Kodimath at Giriyapur