May 20, 2024
ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ

ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ

ಶೃಂಗೇರಿ: ಶರನ್ನವರಾತ್ರಿ ಪ್ರಯುಕ್ತ ಶಾರದಾ ಮಠದಲ್ಲಿ ಭಾನುವಾರ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಯಿತು. ಪಾಶ, ಅಂಕುಶ, ಪುಷ್ಪಬಾಣ ಮತ್ತು ಬಿಲ್ಲು ಧರಿಸಿ ಕರುಣಪೂರಿತ ದೃಷ್ಟಿಯೊಂದಿಗೆ ಸರ್ವಾಲಂಕಾರ ಭೂಷಿತೆ ಶಾರದೆಯ ನೋಡಿ ಭಕ್ತರು ಧನ್ಯರಾದರು.

ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ವಿಶೇಷ ಪೂಜೆ, ಪಾರಾಯಣ, ಜಪ, ಕುಮಾರಿ ಪೂಜೆ, ಸುವಾಸಿನಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು.

ಚಂದ್ರಶೇಖರಭಾರತೀ ಸಭಾಂಗಣದಲ್ಲಿ ಸಂಜೆ ಬೆಂಗಳೂರಿನ ಜ್ಞಾನೋದಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾರದಾ ಮಠದಲ್ಲಿ ಸಂಜೆ 6 ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮ ಮತ್ತಿತರ ಕಡೆಯ ಜನರು ಭಾಗವಹಿಸಿ ಪುಳಕಗೊಂಡರು. ಬಿದರಗೋಡು ರಾಮದೇವಸ್ಥಾನ, ಬೇಗಾರು ಗಣಪತಿ ಅಂಜನೇಯ ದೇವಸ್ಥಾನ, ಕೋಟೆ ಸೋಮೇಶ್ವರ ದೇವಾಲಯ, ಹರಾವರಿ ಮತ್ತು ಹಗ್ಗುರಡಿ ಮಲ್ಲಿಕಾರ್ಜುನ ದೇವಸ್ಥಾನ, ಅಸನಬಾಳು ಗುತ್ಯಮ್ಮ ಮುಂತಾದ ದೇವಾಲಯಗಳ ಪದಾಧಿಕಾರಿಗಳು, ಕುಲಾಲ ಸಂಘ ಮತ್ತು ಮೊಗವೀರ ಸಮಾಜ, ರಾಜ್ಯ ಸರ್ಕಾರ ನೌಕರರ ಸಂಘ, ನಿವೃತ್ತ ನೌಕರರ ಸಂಘ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಧುಶೇಖರಭಾರತೀ ಸ್ವಾಮೀಜಿ ಸಾಂಪ್ರದಾಯಿಕ ಕಿರೀಟ, ಆಭರಣ ಧರಿಸಿ ಭಾಗವಹಿಸಿದರು. ಬಂಗಾರದ ರಥದಲ್ಲಿ ಮೇಲಿನ ಸಿಂಹಾಸನದಲ್ಲಿ ಶಾರದೆಯ ಉತ್ಸವ ಮೂರ್ತಿ ಇಡಲಾಗಿತ್ತು. ವೇದ–ವಾದ್ಯ ಫೋಷ, ಛತ್ರ ಚಾಮರದೊಂದಿಗೆ ಒಳ ಪ್ರಾಂಗಣದಲ್ಲಿ 3 ಸುತ್ತು ಉತ್ಸವ ನಡೆಯಿತು. ಗುರುಗಳು ಸಿಂಹಾಸನದಲ್ಲಿ ಆಸೀನರಾದರು. ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, 4 ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಉತ್ತರ ನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

Rajarajeshwari decoration for Saradambe

About Author

Leave a Reply

Your email address will not be published. Required fields are marked *