May 20, 2024

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚರ್ಚಿಯಾಗದ ಜಿಲ್ಲೆಯ ಅರಣ್ಯ ಸಮಸ್ಯೆಗಳು

0
ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ ಕುಮಾರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಕಸ್ತೂರಿರಂಗನ್ ವರದಿ, ಡೀಮ್ಡ್ ಅರಣ್ಯ, ಸೆಕ್ಷನ್ ೪(೧) ಇನಾಂ ಭೂಮಿ, ಸೊಪ್ಪಿನ ಬೆಟ್ಟ, ಅರಣ್ಯ, ಕಂದಾಯ ಭೂಮಿ ಈ ಎಲ್ಲ ಸಮಸ್ಯೆಗಳನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮರೆಮಾಚಿ ಸಮಸ್ಯೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಜನಪ್ರತಿನಿಧಿಗಳು ನಡೆದುಕೊಂಡಿದ್ದು ಜಿಲ್ಲೆಯ ಜನರಿಗೆ ಮಾಡಿದ ದ್ರೋಹ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ ಕುಮಾರ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ, ಡೀಮ್ಡ್ ಫಾರೆಸ್ಟ್ ವಿಚಾರಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚರ್ಚಿಗೆ ಬರಬೇಕಿತ್ತು. ಆದರೆ ಈ ವಿಚಾರಗಳಿಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಎರಡು ರಾಷ್ಟ್ರೀಯ ಪಕ್ಷಗಳು ನಡೆದುಕೊಂಡಿವೆ ಎಂದು ಲೇವಡಿ ಮಾಡಿದರು.

ಅಕ್ರಮ-ಸಕ್ರಮ, ದರಕಾಸ್ತು ಮತ್ತಿತರೆ ರೈತರ ಭೂಮಿಗಳನ್ನು ೫೦-೬೦ ವರ್ಷದಿಂದ ಪೋಡಿ ಮಾಡುತ್ತಿಲ್ಲ. ಪೋಡಿಗೆ ಬೇಕಾಗುವ ೧ ರಿಂದ ೫ ನಮೂನೆ ತಯಾರಿಸಬೇಕಾದ ಕಂದಾಯ ಅಧಿಕಾರಿಗಳು ಈ ವರೆಗೆ ಒಂದೇ ಒಂದು ನಮೂನೆ ಮಾಡಿಸಲು ಕ್ರಮವಹಿಸಿಲ್ಲ. ರೈತರಿಗೆ ನೀಡಿದ ಕಂದಾಯ ಭೂಮಿಯನ್ನು ೧ ರಿಂದ ೫ ನಮೂನೆ ಮಾಡಿಸಲು ಮೊದಲೇ ಅರಣ್ಯ ಇಲಾಖೆಗೆ ಅಭಿಪ್ರಾಯಕ್ಕಾಗಿ ಕಳುಹಿಸಿ ಸಮಸ್ಯೆಯನ್ನು ಜೀವಂತವಾಗಿ ಇಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ಅರಣ್ಯ, ಕಂದಾಯ ಭೂಮಿ ಸಮಸ್ಯೆ ಇತ್ಯರ್ಥಪಡಿಸಬೇಕಿರುವ ಎಫ್‌ಎಸ್‌ಓಗಳು ಸಿವಿಲ್ ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ. ಇವರನ್ನು ಸ್ವ ಇಚ್ಛೆಯಿಂದ ಕೆಲಸ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ. ಜಿಲ್ಲೆಯ ೨೩೮ ಕಡತಗಳನ್ನು ಎಫ್‌ಎಸ್‌ಓ ಕಚೇರಿಯಲ್ಲಿ ಕಳೆದ ೩ ವರ್ಷದಿಂದ ಕೊಳೆಯುವಂತೆ ಮಾಡಿದ್ದಾರೆ. ಜಿಲ್ಲೆಯ ಜನಪ್ರತಿನಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯ ಕೆಡಿಪಿ ಸಭೆಯ ನಿರ್ಣಯದಂತೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೆ ನಂಬರ್‌ಗಳನ್ನು ಸೆಕ್ಷನ್ ೪(೧) ವ್ಯಾಪ್ತಿಯಿಂದ ಕೈಬಿಟ್ಟು ನಗರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದಿದೆ. ಇದಕ್ಕೆ ಮನ್ನಣೆ ನೀಡಬೇಕು. ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯ ವರದಿಯನ್ನು ಮತ್ತೊಮ್ಮೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಜನಾಭಿಪ್ರಾಯ ಪಡೆಯಲು ಆಗ್ರಹಿಸಿದರು.

ಮೇಲಿನ ಎಲ್ಲ ಸಮಸ್ಯೆಗಳನ್ನು ಜೀವಂತವಾಗಿಟ್ಟಿರುವುದರಿಂದ ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶನ ನೀಡಲು ಮತ್ತು ನಮೂನೆ ೫೦,೫೩, ೫೭, ೯೪ ಸಿ ನಮೂನೆ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆಗೆ ಬಂದವರು ಸರ್ವೆ ಯಾವ ರೀತಿ ಆಗಿದೆ. ಜನ ವಸತಿ ಪ್ರದೇಶ, ಸಾರ್ವಜನಿಕ ಪ್ರದೇಶಗಳಿಗೆ ಜಾಗ ಬಿಟ್ಟು ಸರ್ವೆ ಮಾಡಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಈವರೆಗೆ ಪ್ರಸ್ತಾವಿಸದೆ ಜನರನ್ನುಕತ್ತಲೆಯಲ್ಲಿಟ್ಟಿದ್ದಾರೆ, ಜಂಟಿ ಸರ್ವೆ ಎಂಬುದು ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.

ಈಗಾಗಲೇ ಕಾಡು ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ವಲಸೆ ಬರುತ್ತಿದ್ದು ಜನರಲ್ಲಿ ಜೀವ ಭಯದ ಆತಂಕ ಉಂಟುಮಾಡಿದೆ. ಅದಕ್ಕಾಗಿ ಜಿಲ್ಲಾಡಳಿತ ಸಹಕಾರದೊಂದಿಗೆ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮಾಲೋಚನೆ ನಡೆಸಿ, ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರಾದ ಕೆ.ಕೆ ರಘು ಇದ್ದರು.

Forest problems of the district which were not discussed during the Lok Sabha elections

About Author

Leave a Reply

Your email address will not be published. Required fields are marked *