ಚಿಕ್ಕಮಗಳೂರು: ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಜಿಲ್ಲೆಯ ಅಭಿವೃದ್ದಿಗೆ ವಿವಿಧ ಕಾಮಗಾರಿಗಳನ್ನು ಕೈಗೊಂಡು ಸ್ವಚ್ಚ ಹಾಗೂ ಸುಂದರ ನಗರ ನಿರ್ಮಿಸುವುದು ನಮ್ಮ ಗುರಿ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಹೇಳಿದರು.
ನಗರ ಸಭೆ ವತಿಯಿಂದ ಇಂದು ನಗರಸ ಸಭೆ ಆವರಣದಲ್ಲಿ ಆಯೋಜಿಸಿದ್ದ ನಗರಸಭೆ ವ್ಯಾಪ್ತಿಯಲ್ಲಿ ೧೫ ನೇ ಹಣಕಾಸು ಯೋಜನೆ ಮತ್ತು ನಗರೋತ್ಥಾನ ಹಂತ-೪ ರ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಜಿಲ್ಲೆಯಾದ್ಯಂತ ಮಳೆಯಿಂದಾಗಿ ಅನೇಕ ರಸ್ತೆಗಳು ಹದಗೆಟ್ಟಿವೆ. ಇವುಗಳ ದುರಸ್ಥಿಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಶೀಘ್ರವಾಗಿ ರಸ್ತೆ ದುರಸ್ಥಿ ಕಾರ್ಯ ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲೆಯು ಪ್ರವಾಸಿ ಸ್ಥಳಗಳಿಗೆ ಪ್ರಸಿದ್ದವಾಗಿದ್ದು ಜಿಲ್ಲೆಯಲ್ಲಿರುವ ಪ್ರತಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜಿಲ್ಲೆಯನ್ನು ಇನಷ್ಟು ಸುಂದರಗೊಳಿಸಲು ಕ್ರಮವಹಿಸಲಾಗಿದೆ ಎಂದ ಅವರು ಸಾರ್ವಜನಿಕರ ಪ್ರತಿ ಅಗತ್ಯತೆಗಳನ್ನು ಅರಿತು ಜಿಲ್ಲೆಯನ್ನು ಅಭಿವೃದ್ದಿಗೊಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ನಗರದ ಕತ್ರಿಮಾರಮ್ಮ ದೇವಸ್ಥಾನದಿಂದ ಬೋಳರಾಮೇಶ್ವರ ದೇವಸ್ಥಾನದವರೆಗೆ ರೂ. ೫೦ ಲಕ್ಷ ವೆಚ್ಚದಲ್ಲಿ (ಐ.ಜಿ. ರಸ್ತೆ) ರಸ್ತೆ ವಿಭಜಕದಲ್ಲಿ ೫೪ ಪೋಲ್ಗಳು, ೧ ಹೈಮಾಸ್ಟ್ ಲೈಟ್ ೧೨೦ ಲೈಟ್ಗಳು ಬೀದಿ ದೀಪಗಳನ್ನು ಅಳವಡಿಸುವುದು. ರೂ. ೪೫ ಲಕ್ಷ ವೆಚ್ಚದಲ್ಲಿ ಬೋಳರಾಮೇಶ್ವರ ದೇವಸ್ಥಾನದಿಂದ ರಾಂಪುರದವರೆಗೆ ಡಿವೈಡರ್ಗೆ ಅಕ್ಟಾಗನಲ್ ಪೋಲ್, ೬೪ ಪೋಲ್ಗಳು ೧೨೪ ಲೈಟ್ಗಳು ಅಳವಡಿಸಲು.
ಕಣಿವೆ ರುದ್ರೇಶ್ವರ ದೇವಸ್ಥಾನದಿಂದ ಕತ್ರಿಮಾರಮ್ಮ ದೇವಸ್ಥಾನ, ಶೃಂಗಾರ್ ಸರ್ಕಲ್, ತೊಗರಿಹಂಕಲ್ ಸರ್ಕಲ್, ನೆಲ್ಲೂರು ಗೇಟ್, ರಾಂಪುರ ಸರ್ಕಲ್ ವರೆಗೆ ರೂ. ೨೯೩.೨೩ ಲಕ್ಷ ವೆಚ್ಚದಲ್ಲಿ ಟ್ಯೂಬಲರ್ ಪೋಲ್ ಮತ್ತು ಎಲ್.ಇ.ಡಿ ಬೀದಿ ದೀಪ ಅಳವಡಿಸುವುದು. ಮತ್ತು ಚಿಕ್ಕಮಗಳೂರು ನಗರದ ವಿವಿಧೆಡೆ ಹೈಮಾಸ್ಟ್ ಮತ್ತು ಮಿನಿ ಮಾಸ್ಟ್ ಲೈಟ್, ೮೦ ಡೆಕೋರಟೀವ್ ಪೋಲ್ ಗಳು ೩೨ ಹೈಮಾಸ್ಟ್ ಲೈಟ್, ೩೪೬ ಲೈಟ್ಗಳು ಅಳವಡಿಸುವ ಕಾಮಗಾರಿಗಳಿಗಾಗಿ ಇಂದು ಶಂಕು ಸ್ಥಾಪಿಸಲಾಗಿದೆ ಎಂದ ಅವರು ಈ ಕಾಮಗಾರಿಗಳನ್ನು ಗುಣಮಟ್ಟದಿಂದ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ನಗರಸಭಾ ಆವರಣದಲ್ಲಿನ ಉದ್ಯಾನವನದ ಸಮಗ್ರ ಅಭಿವೃದ್ಧಿಯ ಕಾಮಗಾರಿಯು (ಮ್ಯೂಸಿಕಲ್ ಫೌಂಟೆನ್ ನಿರ್ಮಾಣ ಮತ್ತು ಮ್ಯೂಸಿಕಲ್ ಫೌಂಟೆನ್ ಸುತ್ತಲೂ ಕಲ್ಪಿಸುವುದು ಹಾಗೂ ನಿರ್ಮಾಣ) ರೂ ೨೮೦.೫೦ ಲಕ್ಷ ವೆಚ್ಚದಲ್ಲಿ, ಪಾರ್ಕ್ ಅಭಿವೃದ್ಧಿ, ಪಾತ್ ವೇ ನಿರ್ಮಾಣ, ಗ್ಯಾಜಿಬೋ ನಿರ್ಮಾಣ, ಸ್ವಾಗತ ಕಮಾನು, ಮ್ಯೂಸಿಕಲ್ ಫೌಂಟೆನ್ ನಿರ್ಮಾಣ, ಆಸನ ವ್ಯವಸ್ಥೆ, ಓಪನ್ ಏರ್ ಥಿಯೇಟರ್ ಮತ್ತು ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ರೂ. ೩೮.೭೫ ಲಕ್ಷ ವೆಚ್ಚದಲ್ಲಿ ಚಿಕ್ಕಮಗಳೂರು ನಗರಸಭಾ ಕಛೇರಿ ಆವರಣದಲ್ಲಿ ಆಸ್ಪಿರೇಷನಲ್ ಶೌಚಾಲಯ ನಿರ್ಮಿಸಿಲಾಗಿದ್ದು, ಮಹಿಳೆಯರಿಗೆ ೦೩ ಸಂಖ್ಯೆ ಶೌಚಾಲಯಗಳು, ಮಹಿಳಾ ವಿಶೇಷ ಚೇತನರಿಗೆ ೦೧ ಸಂಖ್ಯೆ ಶೌಚಾಲಯ,
ಪುರುಷರಿಗೆ ೦೫ ಸಂಖ್ಯೆ ಶೌಚಾಲಯಗಳು ಮತ್ತು ೦೩ ಯುರಿನಲ್ಗಳು, ಪುರುಷ ವಿಶೇಷ ಚೇತನರಿಗೆ ೦೧ ಸಂಖ್ಯೆ ಶೌಚಾಲಯ ವಿಂಗಡಿಸಿ ನಿರ್ಮಿಸಲಾಗಿದೆ ಹಾಗೂ ರೂ. ೧೪.೦೦ ಲಕ್ಷ ವೆಚ್ಚದಲ್ಲಿ ನಗರಸಭಾ ಆವರಣದಲ್ಲಿರುವ ಶ್ರೀ ಗಣಪತಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಸಂಪೂರ್ಣ ನವೀಕರಣ ಕಾಮಗಾರಿಗಳನ್ನು ೧೫ನೇ ಹಣಕಾಸು ಮತ್ತು ನಗರಸಭಾ ನಿಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದ ಅವರು. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ನೆರವೇರಿಸಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗಾಗಿ ಶಂಕು ಸ್ಥಾಪನೆಗೊಳಿಸುವ ಪ್ರತಿಯೊಂದು ಕಾಮಗಾರಿಗಳ ಅನುಷ್ಠಾನ ಕಾರ್ಯವನ್ನು ವಿಳಂಬಗೊಳಿಸದೆ ಹಂತ ಹಂತವಾಗಿ ಕಾಮಗಾರಿಗಳನ್ನು ಸಮಗ್ರ ಯೋಜನೆ ರೂಪಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು ಯಾವುದೇ ವ್ಯಕ್ತಿಗೆ ಅಧಿಕಾರ ಶಾಶ್ವತವಲ್ಲ ನಮ್ಮ ಶ್ರೇಷ್ಠತೆಯನ್ನು ಕಾಯಕದ ಮೂಲಕ ತಿಳಿಸಬೇಕು ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅವರು ಮಾತನಾಡಿದರು. ನಗರಸಭೆ ಪೌರಾಯುಕ್ತರು ಬಿ.ಸಿ. ಬಸವರಾಜು ಎಲ್ಲರನ್ನೂ ಸ್ವಾಗತಿಸಿದರು.,
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್ ಮುಂತಾದವರು ಉಪಸ್ಥಿತರಿದ್ದರು.
Our goal is to build a beautiful city through development works.