ಚಿಕ್ಕಮಗಳೂರು-ವ್ಯಕ್ತಿ ಶಾಶ್ವತವಲ್ಲ. ಆದರೆ ವ್ಯಕ್ತಿತ್ವ ಶಾಶ್ವತ. ಹುಟ್ಟು ಸಾವಿನ ನಡುವೆ ಇರುವುದೇ ಜೀವನ. ಈ ಅಂತರದಲ್ಲಿನ ಜೀವನ ಮೌಲ್ಯವೇ ನಮ್ಮನ್ನು ಶಾಶ್ವತವಾಗಿ ಇರುವಂತೆ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೊಗಸೆ ದೇವರಗದ್ದೆ ಕೃಷ್ಣ ಶೆಟ್ಟರ ಸಂಸ್ಮರಣೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನ ಮೌಲ್ಯವೇ ಸಾವಿನ ನಂತರವೂ ಉಳಿಯುತ್ತವೆ. ಜೀವನ ಮೌಲ್ಯಗಳು ಕಟಿಬದ್ಧರಾದವರು ಮರಣದ ಬಳಿಕವೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಪ್ರತಿಪಾದಿಸಿದರು.
ರಾಮ ಹಾಗೂ ರಾಮಾಯಣ ಹತ್ತರಿಂದ ಹದಿನೈದು ಸಾವಿರ ವರ್ಷಪೂರ್ವದ್ದು. ಆದರೆ ರಾಮ ಇಂದಿಗೂ ಜನಮಾನಸದಲ್ಲಿ ಓರ್ವ ಆದರ್ಶ ಪುರುಷ ದೇವತಾ ಸ್ವರೂಪವಾಗಿ ಉಳಿದುಕೊಂಡಿದ್ದಾನೆ. ಸತ್ಯಹರಿಶ್ಚಂದ್ರ ಮೌಲ್ಯಗಳಿಗೆ ಕಟಿಬದ್ಧನಾದ ಕಾರಣದಿಂದಲೇ ಆತನ ಹೆಸರಿನೊಂದಿಗೆ ಸತ್ಯ ಇದುವರೆಗೆ ಉಳಿದುಕೊಂಡು ಬಂದಿದೆ. ಶ್ರೀಮಂತರಾದ ಕ್ಷಣ ಅವರ ಹೆಸರು ಜನಮಾನಸದಲ್ಲಿ ಉಳಿಯುವುದಿಲ್ಲ. ಸಾಮ್ರಾಟರಾದರೂ ಅವರನ್ನು ಯಾರು ನೆನೆಯುವುದಿಲ್ಲ. ಆದರೆ ಜೀವನ ಮೌಲ್ಯವನ್ನು ಉಳಿಸಿಕೊಂಡು ಬದುಕಿದಾಗ ಅವರ ಹೆಸರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.
ದೇವರ ಮನೆ ಕೃಷ್ಣ ಶೆಟ್ಟಿ ಅವರು ಮರಣ ಹೊಂದಿ ೨೫ ವರ್ಷಗಳ ನಂತರ ಅವರ ಸಂಸ್ಮರಣೆ ಅಂಗವಾಗಿ ಪುಸ್ತಕ ಹೊರ ತರುತ್ತಿರುವುದು ಅವರು ಎಷ್ಟರಮಟ್ಟಿಗೆ ತಮ್ಮ ಪ್ರಭಾವ ಬೀರುದ್ದರು ಹಾಗೂ ಎಷ್ಟು ಜೀವನ ಮೌಲ್ಯ ಎಲ್ಲರಲ್ಲೂ ತುಂಬಿದ್ದರು ಎಂಬುದನ್ನು ತೋರುತ್ತದೆ ಎಂದು ಸ್ಮರಿಸಿದರು.
ಹಿಂದುಗಳ ಜನಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ. ಇಂದು ಮದುವೆಯಾಗುವ ಯುವಕರಿಗೆ ಹುಡುಗಿಯನ್ನು ಕೊಡುವವರಿಲ್ಲ. ಮದುವೆಯಾದವರು ಮಕ್ಕಳು ಬೇಡ ಎನ್ನುತ್ತಿದ್ದಾರೆ. ಮುಂದೆ ನಾವಿರುವುದಿಲ್ಲ ಆದರೆ ಸಂಘರ್ಷ ಇರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆ ಕಡಿಮೆಯಾದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಿಂದಿನ ಗಾಂಧಾರ ಇಂದು ಅಫ್ಘಾನಿಸ್ತಾನವಾಗಿದೆ. ಇತ್ತೀಚೆಗೆ ಪಾಕಿಸ್ತಾನವು ಸೃಷ್ಟಿಯಾಗಿದೆ. ಬಾಂಗ್ಲಾದೇಶದಲ್ಲಿ ಸೇವೆ ಮಾಡುತ್ತಿದ್ದ ಇಸ್ಕಾನ್ ನವರನ್ನು ಭಯೋತ್ಪಾದಕರು ಎಂದು ಜೈಲಿಗಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಎಚ್ ಡಿ ತಮ್ಮಯ್ಯ ಮಾತನಾಡಿ, ನಮ್ಮ ದೇಶ ಸಂಸ್ಕೃತಿ ಬಗ್ಗೆ ಅಭಿಮಾನ ಇದ್ದರೆ ಯುವ ಪೀಳಿಗೆ ತಮ್ಮ ಕುಟುಂಬದ ಹಿರಿಯರು ಹಾಗೂ ಸಮಾಜದ ಹಿರಿಯರ ಬಗ್ಗೆ ಸಾಮಾಜಕ್ಕೆ ತಿಳಿಸಿಕೊಡುವ ಕೆಲಸ ಮಾಡುತ್ತಾರೆ. ಕೇವಲ ಕುಟುಂಬಕ್ಕಾಗಿ ಮಾತ್ರವಲ್ಲದೆ ಸಮಾಜಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಬದುಕಿದಾಗ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದರು.
ಬೊಗಸೆ ದೇವರಗದ್ದೆ ಕುಟುಂಬದ ಮಂಜಪ್ಪ ಶೆಟ್ಟಿ ಮಾತನಾಡಿ, ಕೃಷ್ಣ ಶೆಟ್ಟಿ ಅವರು ತಾವು ಬದುಕಿರುವವರೆಗೂ ಸಮಾಜ ಸೇವಕರಾಗಿ ದಾನ ಧರ್ಮ ಮಾಡಿಕೊಂಡು ಹಲವು ಸಾಮಾಜಿಕ ಕಾರ್ಯ ಮಾಡಿದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಇತರೆ ಹಲವು ಮಕ್ಕಳ ಓದಿಗೆ ನೆರವಾಗಿದ್ದಾರೆ. ಇದಲ್ಲದೆ ತಮ್ಮ ಗ್ರಾಮದ ಅಕ್ಕಪಕ್ಕದ ಹಲವು ಗ್ರಾಮಗಳ ಜನರ ಸಮಸ್ಯೆಗಳನ್ನು ಬಗೆಹರಿಸಿ ಜನಾನುರಾಗಿ ಜೀವನ ನಡೆಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಗಸೆಯ ಬಿ.ಕೆ.ಶೇಷಪ್ಪ ಶೆಟ್ಟರು ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮಂಜಪ್ಪ ಶೆಟ್ಟಿ ಮಸಗಲಿ, ಬೆಂಗಳೂರಿನ ಪತ್ರಿಕೆಯ ಬೆಳ್ಳಿಚುಕ್ಕಿ ವೀರೇಂದ್ರ, ಶ್ರೀ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಸಿ.ಎಚ್.ಇಂದುಕುಮಾರ್, ಕೋಲಾರದ ಡಿ.ಡಿ.ಎಲ್.ಆರ್. ಬಿ.ಕೆ.ಸಂಜಯ್, ಪುಸ್ತಕದ ಸಂಪಾದಕ ಎಚ್.ಎನ್.ಕೃಷ್ಣ ಶೆಟ್ಟಿ, ಕುಟುಂಬದ ಹಿರಿಯರಾದ ಜಯಲಕ್ಷ್ಮಮ್ಮ ಉಪಸ್ಥಿತರಿದ್ದರು.
The person is not eternal but the personality is eternal.