ದಾವಣಗೆರೆ: ಹಿಂದೆ ಏನೇ ನಡೆದಿರಲಿ. ಶ್ರೀ ಜಗದ್ಗುರು ಪಂಚಾಚಾರ್ಯರು ಒಗ್ಗೂಡಿ ಹೆಜ್ಜೆ ಹಾಕಿದಲ್ಲಿ ಸದೃಢ ಸಮಾಜ ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕಳೆದ ೧೬ ವರ್ಷಗಳಿಂದ ಭಕ್ತರು ನೀರೀಕ್ಷಿಸುತ್ತಿದ್ದ ಶುಭ ಘಳಿಗೆ ಇಂದು ಕೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಶಿವಾಚಾರ್ಯ ಸಮೂಹ ಭಕ್ತರು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಮುನ್ನಡೆದಿದ್ದಾದರೆ ಸಮಾಜದ ಹಿತದೃಷ್ಟಿಯಿಂದ ಗಟ್ಟಿ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಶಾಮನೂರು ಶಿವಶಂಕರಪ್ಪನವರ ಒತ್ತಾಸೆಯಿಂದ ಇಂದು ಇದೆಲ್ಲ ಸಾಧ್ಯವಾಗಿದೆ. ಇಂದು ಜಾತಿ ಜಾತಿಗಳ ಹೆಸರಿನಲ್ಲಿ ಸಮಾಜ ಛಿದ್ರ ಛಿದ್ರವಾಗುತ್ತಿರುವುದನ್ನು ನೋಡಿ ಮನಸ್ಸಿಗೆ ಬಹಳ ವೇದನೆಯಾಗುತ್ತಿದೆ.
ಪೂರ್ವದ ಆಚಾರ್ಯರು ಜಾತಿ ಮತ ಪಂಥಗಳನ್ನು ಮೀರಿ ಭಾವೈಕ್ಯತೆಯನ್ನು ಮೂಡಿಸುವ ದೃಷ್ಟಿಯಿಂದ ದೇಶದಾದ್ಯಂತ ಪಂಚ ಪೀಠಗಳನ್ನು ಸ್ಥಾಪಿಸಿದ್ದಾರೆ. ಅಸ್ಪೃಷ್ಯರ ಉದ್ಧಾರ ಮಹಿಳೆಯರಿಗೆ ಸಮಾನ ಸ್ಥಾನ ಕಲ್ಪಿಸುವ ಕಾರ್ಯವನ್ನು ಸಹಸ್ರಾರು ವರುಷಗಳ ಹಿಂದೆಯೇ ಮಾಡಿದ್ದಾರೆ. ಸಮಾಜದ ಒಳಪಂಗಡಗಳು ಮೂಲ ಸೆಲೆಯಲ್ಲಿ ಬರುವ ಅವಶ್ಯಕತೆಯಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಅ.ಭಾ.ವೀ.ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಪಂಚ ಪೀಠಾಧೀಶರನ್ನು ಒಗ್ಗೂಡಿಸುವ ಆಶಯ ಇಂದು ಸಾಧ್ಯವಾಗಿದ್ದು ಸಂತಸ ತಂದಿದೆ ಎಂದರು. ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ ವೀರಶೈವ ಮಹಾಸಭೆಯ ಇತಿಹಾಸದಲ್ಲಿ ಇಂದು ಸುವರ್ಣ ಘಳಿಗೆ. ಇದು ಮೊದಲನೆಯ ಹೆಜ್ಜೆ ಆಗಿದ್ದು ಮುಂದಿನ ದಿನಗಳಲ್ಲಿ ಗುರು ವಿರಕ್ತರು ಮತ್ತು ಶರಣ ಸಂಪ್ರದಾಯವನ್ನು ಒಗ್ಗೂಡಿಸಿ ಭವ್ಯ ಕಾರ್ಯಕ್ರಮ ಮಾಡುವ ಉದ್ದೇಶವಿದೆ. ೧೯೭೫ರ ಪೂರ್ವದಲ್ಲಿ ಆರ್ಥಿಕ ಮೀಸಲಾತಿ ಇದ್ದುದು ನಂತರ ಜಾತಿ ಆಧಾರಿತ ಮೀಸಲಾತಿ ಪ್ರಾರಂಭದ ನಂತರ ಈ ಸಮಸ್ಯೆಗಳು ಉದ್ಭವಿಸಿವೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ ವೀರಶೈವ ಲಿಂಗಾಯತ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಮಂತ್ರಿ ಡಾ|| ಬಿ.ಎಸ್.ಯಡಿಯೂರಪ್ಪ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ರಾಜ್ಯ ಬಿ.ಜೆ.ಪಿ.ಅಧ್ಯಕ್ಷ-ಶಾಸಕ ಬಿ.ವೈ.ವಿಜಯೇಂದ್ರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಭಾಗವಹಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ ಶ್ರೀ ಹಿಮವತ್ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು ಮಾತನಾಡಿ ಜಾತಿ ಜನಗಣತಿ ಸಂದರ್ಭದಲ್ಲಿ ನೀಡುವ ನಮೂನೆಗಳ ಪರಿಷ್ಕರಣೆ ಆಗಬೇಕು. ಧರ್ಮ ಜಾತಿ ಉಪಜಾತಿಗಳನ್ನು ಪ್ರತ್ಯೇಕ ಕಾಲಂನಲ್ಲಿ ತೋರಿಸುವಂತೆ ಜಾತಿ ಗಣತಿ ನಮೂನೆಯಲ್ಲಿ ಪರಿಷ್ಕರಣೆ ಕೇಂದ್ರ ಸರ್ಕಾರದಿಂದ ಆಗಬೇಕು. ಇದನ್ನು ಮನದಟ್ಟು ಮಾಡುವ ಕೆಲಸ ಎಲ್ಲ ಪಕ್ಷಗಳ ಸಂಸದರು ಮಾಡುವ ಅವಶ್ಯಕತೆಯಿದೆ ಎಂದ ಅವರು ಇಂದು ತಮ್ಮ ಅಗಮನ ಭಕ್ತರಿಗಾಗಿ ಎಂದರು. ಸಾನ್ನಿಧ್ಯ ವಹಿಸಿದ ಶ್ರೀಮತ್ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ ವೀರಶೈವರನ್ನು ಅವರ ವೇಷ ಭೂಷಣಗಳಿಂದ ಗುರುತಿಸದೇ ಅವರ ಆಚಾರ ವಿಚಾರಗಳಿಂದ ಗುರುತಿಸುವಂತಾಗಬೇಕು. ಅ.ಭಾ.ವೀರಶೈವ ಮಹಾಸಭೆ ತನ್ನ ಕಾರ್ಯ ಕ್ಷೇತ್ರವನ್ನು ದೇಶದ ಉತ್ತರ ಭಾಗಕ್ಕೂ ಪಸರಿಸಬೇಕು ಎಂದರು.
ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಾತನಾಡಿ ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ಇಂದು ವೀರಶೈವ ಲಿಂಗಾಯತ ಸಮಜವನ್ನು ಹೆಚ್ಚು ಹೆಚ್ಚಾಗಿ ಸಂಘಟಿಸುವ ಕಾಲ ಬಂದಿದೆ. ಪ್ರತಿಯೊಬ್ಬರೂ ಒಗ್ಗಟ್ಟಾಗಿ ಧರ್ಮ ಕಟ್ಟುವ ಕೆಲಸ ಮಾಡಬೇಕಾಗಿದೆ. ಬರಲಿರುವ ಜಾತಿ ಗಣತಿಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಪೀಠಾಚಾರ್ಯರು ಒಂದಾಗಿದ್ದಾರೆ. ಶಿವಾಚಾರ್ಯರು ಮತ್ತು ಸಮಾಜದ ಜನತೆ ಒಗ್ಗಟ್ಟಿನಿಂದ ಕೆಲಸ ಮಾಡಲಿ ಎಂದರು. ಸಾನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಮಾತನಾಡಿ ಹಲವಾರು ಕಾರಣಗಳಿಂದ ಸಮಾಜ ಕವಲು ದಾರಿಯಲ್ಲಿ ಹೋಗುತ್ತಿದೆ. ಅದನ್ನು ಸರಿಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ವೀರಶೈವ ಲಿಂಗಾಯತ ಸಮಾಜದ ವಿಚಾರ ಬಂದಾಗ ಎಲ್ಲ ಪಕ್ಷ ಭೇದಗಳನ್ನು ಜಾತಿ ಭೇದಗಳನ್ನು ಮರೆತು ಮುನ್ನಡೆಯಬೇಕೆಂದರು.
ಹಂಪಿಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಹೃದಯ ಹಂಬಲ ನುಡಿಗಳನ್ನಾಡಿದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಅ.ಭಾ.ವೀ.ಮಹಾಸಭೆ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿ.ಪಂ.ಮಾಜಿ ಸದಸ್ಯರಾದ ಬಿ.ಎಂ.ವಾಗೀಶಸ್ವಾಮಿ ಭಾಗವಹಿಸಿದ್ದರು. ಬೆಂಗಳೂರಿನ ಶಿವಶಂಕರ ಶಾಸ್ತ್ರಿಗಳಿಂದ ಪ್ರಾರ್ಥನೆ, ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್ ಇವರಿಂದ ಸ್ವಾಗತ, ವಿಶ್ವಪ್ರಭುದೇವ ಶಿವಾಚಾರ್ಯರು ಹಾಗೂ ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.
Let the five courts step together.