April 16, 2024

ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ – ಸುರಕ್ಷತೆಗೆ ಹೆಚ್ಚು ಆಧ್ಯತೆ ನೀಡಬೇಕು

0
ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಪುನಶ್ಚೇತನ ಕಾರ್ಯಾಗಾರ

ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಪುನಶ್ಚೇತನ ಕಾರ್ಯಾಗಾರ

ಚಿಕ್ಕಮಗಳೂರು: ವಿದ್ಯಾರ್ಥಿ ನಿಲಯಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚು ಆಧ್ಯತೆ ನೀಡಬೇಕು ಎಂದು ಹಾಸ್ಟೆಲ್ ಸಿಬ್ಬಂದಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಗೋಪಾಲಕೃಷ್ಣ ಸೂಚಿಸಿದರು.

ಅವರು ಶುಕ್ರವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳ ಅಡುಗೆ ಸಿಬ್ಬಂದಿಗಳು, ಸಹಾಯಕರು, ಮೇಲ್ವಿಚಾರಕರು ಹಾಗೂ ಕಾವಲುಗಾರರಿಗೆ ಏರ್ಪಡಿಸಲಾಗಿದ್ದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬೇರೆ ಬೇರೆ ಇಲಾಖೆ ಸಿಬ್ಬಂದಿಗಳನ್ನು ಹೋಲಿಸಿಕೊಂಡರೆ ಹಾಸ್ಟೆಲ್ ಸಿಬ್ಬಂದಿಗಳ ಕೆಲಸ ಕ್ಲಿಷ್ಟಕರವಾಗಿರುತ್ತದೆ. ಅವರು ಯಾವುದೇ ಕಡತಗಳೊಂದಿಗಾಗಲಿ, ಸಾಮಾನ್ಯ ಜನರೊಂದಿಗಾಗಲಿ ಸಂಬಂಧ ಇರುವುದಿಲ್ಲ. ಹಾಸ್ಟೆಲ್‌ಗಳಲ್ಲಿ ಮನೆ ರೀತಿಯ ವಾತಾವರಣ ನಿರ್ಮಾಣ ಮಾಡಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ ಎಂದರು.

ಈ ಜವಾಬ್ದಾರಿಗಳು ಬಂದಂತಹ ಸಂದರ್ಭದಲ್ಲಿ ಒತ್ತಡಗಳೂ ಇರುತ್ತದೆ. ಅದನ್ನು ಯಾವರೀತಿ ನಿಭಾಯಿಸಬೇಕು, ಜಾಬ್ ಚಾರ್ಟ್‌ಗೆ ಅನುಗುಣವಾಗಿ ಹೇಗೆ ಕೆಲಸ ಮಾಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು ಎಂದರು.

ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಮಾತನಾಡಿ, ಹಾಸ್ಟೆಲ್‌ಗಳಲ್ಲಿ ಅಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಪೌಷ್ಠಿಕಾಂಶದ ಆಹಾರ ಪೂರೈಸುವ ಜೊತೆಗೆ ಸಿಬ್ಬಂಧಿಗಳು ಮಾನಸಿಕ ಒತ್ತಡ ನಿಭಾಯಿಸುದು ಅತೀ ಅಗತ್ಯವಾಗಿದ್ದು, ಕಾರ್ಯಾಗಾರದಲ್ಲಿ ತಜ್ಞರು ನೀಡಿದ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಹಾಸ್ಟೆಲ್ ಸಿಬ್ಬಂದಿಗಳು ಕುಂದು ಕೊರತೆಗಳಿದ್ದರೆ ಹೇಳಿಕೊಳ್ಳಬೇಕು. ಅದಕ್ಕೆ ಪರಿಹಾರ ಕೊಡಿಸುತ್ತೇವೆ. ಇದೇ ವೇಳೆ ಆರೋಗ್ಯ ಇಲಾಖೆ ವತಿಯಿಂದ ಬಿಪಿ, ಮಧುಮೇಹ ಇನ್ನಿತರೆ ಆರೋಗ್ಯ ಸಮಸ್ಯೆಗಳ ಕುರಿತು ಪರೀಕ್ಷೆಗಳನ್ನು ಮಾಡಿಲಾಗಿದ್ದು, ವೈದ್ಯರು ನೀಡಿರುವ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಸಿಎಂ ಇಲಾಖೆ ಅಡಿಯಲ್ಲಿ ೩ ಹಾಸ್ಟೆಲ್‌ಗಳು, ೭ ಮೊರಾರ್ಜಿ ದೇಸಾಯಿ ಶಾಲೆಗಳು ಹಾಗೂ ೧ ಆಶ್ರಮ ಶಾಲೆಗಳಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಶೈಕ್ಷಣಿಕ ಗುರಿ ಸಾಧಿಸಲು ಅಗತ್ಯವಿರುವ ಎಲ್ಲ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

ಕಾರ್ಯಾಗಾರದಲ್ಲಿ ನೀಡಿರುವ ಸಲಹೆ, ಸೂಚನೆಗಳನ್ನು ಪಾಲಿಸುವ ಮೂಲಕ ಹಾಸ್ಟೆಲ್‌ಗಳನ್ನು ಸ್ವಚ್ಛವಾಗಿಟ್ಟುಕೊಂಡು, ಊಟ, ಉಪಹಾರದಲ್ಲಿ ಗುಣಮಟ್ಟ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಈ ಸಂಬಂಧ ಆರ್‌ಸಿಹೆಚ್ ಅಧಿಕಾರಿ ಡಾ.ಮಂಜುನಾಥ್ ಅವರಿಂದ ಉಪನ್ಯಾಸ ಏರ್ಪಡಿಸಿ ಆರೋಗ್ಯದ ದೃಷ್ಠಿಯಿಂದ ಆಹಾರ ಹೇಗಿರಬೇಕು. ಸಿಬ್ಬಂದಿಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ಕೊಡಿಸಲಾಯಿತು.

ಸಿಬ್ಬಂದಿಗಳ ಮಾನಸಿಕ ಆರೋಗ್ಯದ ಕುರಿತು ಡಾ.ವಿನಯ್ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಆಹಾರ ಸುರಕ್ಷತಾ ಅಧಿಕಾರಿ ಸುರೇಶ್ ಮಾಹಿತಿ ನೀಡಿದರು. ಅಗ್ನಿಶಾಮಕ ಇಲಾಖೆ ಅಧಿಕಾರಿ ಪ್ರವೀಣ್ ಅವರು ಹಾಸ್ಟೆಲ್‌ಗಳಲ್ಲಿ ಬೆಂಕಿ ಅವಘಡಗಳು ಉಂಟಾಗದಂತೆ ಮುಂಜಾಗ್ರತೆ ವಹಿಸುವ ಕುರಿತು ಮಾಹಿತಿ ನೀಡಿದರು. ಬಿಸಿಎಂ ಇಲಾಖೆ ತಾಲ್ಲೂಕು ಅಧಿಕಾರಿ ಬಡಿಗೇರ ಹಾಗೂ ಎಲ್ಲಾ ತಾಲ್ಲೂಕಿನ ಅಡುಗೆ ಸಿಬ್ಬಂದಿ, ನಿಲಯ ಪಾಲಕರು ಭಾಗಿಯಾಗಿದ್ದರು.

Revitalization workshop

About Author

Leave a Reply

Your email address will not be published. Required fields are marked *

You may have missed